ಮುದ್ದೇಬಿಹಾಳ: ಸೆಲ್ಯೂಟ್ ಇಂಟರ್‌ನ್ಯಾಶನಲ್ ಸಂಸ್ಥೆ, ವಿಜಯಪುರ ವತಿಯಿಂದ ನೀಡಲಾಗುವ 2025ನೇ ಸಾಲಿನ ‘ವರ್ಷದ ಸೂಪರ್ ಕಾಫ್’ ಪ್ರಶಸ್ತಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೊಲೀಸ್ ಮುಖ್ಯ ಪೇದೆ ಶ್ರೀಮತಿ ಎಸ್.ಆರ್. ಕೊಣ್ಣೂರ ಅವರು ಭಾಜನರಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅವರು ಸಲ್ಲಿಸಿರುವ ಕರ್ತವ್ಯನಿಷ್ಠ, ಪ್ರಾಮಾಣಿಕ ಹಾಗೂ ಜನಸೇವಾಮುಖಿ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ಎಸ್.ಆರ್. ಕೊಣ್ಣೂರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮಹಮ್ಮದ್ ಪಸಿಯುದ್ದಿನ್, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಮತ್ತು ಕರ್ತವ್ಯಪರತೆ ಅತ್ಯಂತ ಮುಖ್ಯವಾಗಿದ್ದು, ಕೊಣ್ಣೂರ ಅವರು ತಮ್ಮ ಸೇವೆಯ ಮೂಲಕ ಇಲಾಖೆಗೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಪಿಎಸ್ಐ ಸಂಜಯ ತಿಪ್ಪಾರಡ್ಡಿ, ಮಹಿಳಾ ಪೊಲೀಸ್ ಸಿಬ್ಬಂದಿ ಸಮಾಜದಲ್ಲಿ ಭದ್ರತೆ ಹಾಗೂ ವಿಶ್ವಾಸ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಶ್ರೀಮತಿ ಕೊಣ್ಣೂರ ಅವರಿಗೆ ದೊರೆತಿರುವ ಈ ಪ್ರಶಸ್ತಿ ಇತರ ಸಿಬ್ಬಂದಿಗೂ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತ ಶ್ರೀಮತಿ ಎಸ್.ಆರ್. ಕೊಣ್ಣೂರ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವು ಸರಳ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನಡೆಯಿತು.

Leave a Reply

Your email address will not be published. Required fields are marked *