ಮುದ್ದೇಬಿಹಾಳ :- ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ, ಇಡೀ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೂ ಮುದ್ದೇಬಿಹಾಳ ತಾಲ್ಲೂಕು ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿರುವುದು ಅತ್ಯಂತ ದುರಂತಕರ ಸಂಗತಿ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ದಾಸೋಹ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ದೇಶದ ಮೊದಲ ಮಹಿಳೆಯಾಗಿದ್ದು, ಈ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಆಗಿದೆ ಎಂದು ಹೇಳಿದರು. ಉದ್ಯೋಗಿಯಾಗಬೇಡ, ಉದ್ಯಮಿಯಾಗು ಎನ್ನುವ ಮಂತ್ರವನ್ನು ಸಾರುವ ಬಜೆಟ್ ಇದಾಗಿದ್ದು, ಇದು ದೇಶಪ್ರೇಮಿಗಳಿಗೆ ಮಾತ್ರ ಅರ್ಥವಾಗುತ್ತದೆ. ಕಾಂಗ್ರೆಸ್ ನಾಯಕರಿಗೆ ಈ ಬಜೆಟ್ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಯುವಕರು ದುಡಿದು ಸರ್ಕಾರಿ ಅಥವಾ ಅರೆಸರ್ಕಾರಿ ಉದ್ಯೋಗ ಪಡೆಯಲು ಶಿಕ್ಷಣ ಕಲಿಯುತ್ತಿದ್ದರು. ಆದರೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇಶಭಕ್ತಿಯ ಪರಿಣಾಮವಾಗಿ ಯುವಕರು ದೇಶಪ್ರೇಮದ ಜೊತೆಗೆ ಉದ್ಯಮದತ್ತ ಮುಖ ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ತಾಲ್ಲೂಕಿನ ಸದ್ಯದ ದುಸ್ಥಿತಿ, ಮೂಲಸೌಕರ್ಯಗಳ ಕೊರತೆ ಹಾಗೂ ಹಾಲಿ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ ನಡೆಸಿದರು.
ನಂಜುಂಡಪ್ಪ ಹಾಗೂ ಗೋವಿಂದರಾಜ ವರದಿಗಳ ಪ್ರಕಾರ ಮುದ್ದೇಬಿಹಾಳ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ವರದಿಗಳನ್ನು ಆಧಾರವಾಗಿಸಿಕೊಂಡು ಹೆಚ್ಚಿನ ಅನುದಾನ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ತರಬೇಕಾಗಿತ್ತು. ಆದರೆ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಒಂದು ಕೋಟಿ ರೂಪಾಯಿ ಅನುದಾನವೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಬಿಡುಗಡೆ ಮಾಡಿದ್ದರೆ ಅದರ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲಿ ಎಂದು ನಡಹಳ್ಳಿಯವರು ಸವಾಲು ಹಾಕಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಾಲಿ ಶಾಸಕರಲ್ಲಿ ದೂರದೃಷ್ಟಿ ಮತ್ತು ಪ್ರಾಮಾಣಿಕ ಪ್ರಯತ್ನಗಳ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಲೂಟಿ ಮಾಡಲಾಗುತ್ತಿದೆ , ತಮ್ಮ ಶಾಸಕತ್ವದ ಅವಧಿಯಲ್ಲಿ ಲ್ಯಾಂಡ್ ಆರ್ಮಿಗೆ ಯಾವುದೇ ಕಾಮಗಾರಿ ನೀಡಿಲ್ಲ ಎಂದು ತಿಳಿಸಿದ ಅವರು, ಈಗ ಎಲ್ಲಾ ಕೆಲಸಗಳು ಸುರೇಶ್ ಗೌಡ ಅವರ ಆಪ್ತರ ಮೂಲಕವೇ ನಡೆಯುತ್ತಿದ್ದು, ಸಾರ್ವಜನಿಕ ಹಣ ಲೂಟಿಯಾಗುತ್ತಿದೆ, ತಮ್ಮ ಅವಧಿಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದರು. ಆದರೆ ಈಗ ಆ ಗುತ್ತಿಗೆದಾರರು ಎಲ್ಲಿಗೆ ಮಾಯವಾದರು ಎಂದು ಪ್ರಶ್ನಿಸಿದರು.
ಇದಲ್ಲದೆ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ನ್ಯಾಯ ಸಿಗದಂತಾಗಿದೆ. ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ದಿನೇದಿನೇ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಪಟ್ಟಣದ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮುಖ್ಯ ರಸ್ತೆಗಳನ್ನು ಸಿಮೆಂಟ್ ರಸ್ತೆ ಮಾಡಿದ್ದೇ ನಾನು , ವ್ಯಾಪಾರಸ್ಥರು ದೂಳು ಸೇವನೆ ಮಾಡುತ್ತಾ ವ್ಯಾಪಾರ ಮಾಡುತ್ತಿದ್ದರು, ಇದಕ್ಕೆ ಅವರೇ ಉತ್ತರಿಸಬೇಕು ಎಂದು ಹೇಳಿದರು.
ನಾಗರಬೆಟ್ಟದ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು, ರೈತರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದೆ. ಈಗಿನ ಶಾಸಕರು ಡವಳಗಿ ಕೆರೆಯನ್ನು ತುಂಬಿಸಿ ಕಾರ್ಯನಿಷ್ಠೆ ತೋರಿಸಲಿ ಎಂದು ಸವಾಲು ಹಾಕಿದರು.
ಮುಸ್ಲಿಂ ಸಮುದಾಯದವರು ಮತ ಹಾಕದಿದ್ದರೂ ತಾವು ಅವರಿಗೆ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ನಡಹಳ್ಳಿಯವರು, ಉರ್ದು ಶಾಲೆಗೆ 60 ಲಕ್ಷ ರೂ. ಅನುದಾನ ನೀಡಿದ್ದುದನ್ನು ಹಾಗೂ ಅಂಬೇಡ್ಕರ್ ಸರ್ಕಲ್ ಮತ್ತು ಬಸವೇಶ್ವರ ಸರ್ಕಲ್ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಶ್ರಮಿಸಿದ್ದುದನ್ನು ಸ್ಮರಿಸಿದರು. ಆದರೆ ಈಗಿನ ಕಾಂಗ್ರೆಸ್ ನಾಯಕರು ಕೇವಲ ಜಾತಿ-ಧರ್ಮದ ಹೆಸರಿನಲ್ಲಿ ಮತ ಪಡೆದು ಜನರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಮುದ್ದೇಬಿಹಾಳದ ಕ್ರೀಡಾಂಗಣಕ್ಕೆ 2 ಕೋಟಿ 50 ಲಕ್ಷ ರೂ., ಶಾಲಾ ಕಟ್ಟಡಗಳಿಗೆ 1 ಕೋಟಿ 50 ಲಕ್ಷ ರೂ. ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ತಾವು ಅನುದಾನ ನೀಡಿದ್ದೇನೆ ಎಂದು ಹೇಳಿದರು. ಮುಸ್ಲಿಂ ಸಮುದಾಯದವರು ಮತ ಹಾಕಿದವರಿಗೆ ಕೊರಳುಪಟ್ಟಿ ಹಿಡಿದು ಅಭಿವೃದ್ಧಿಯನ್ನು ಕೇಳಲಿ ಎಂದು ಕಿಡಿಕಾರಿದರು.
ಈ ಬಾರಿ ಮುದ್ದೇಬಿಹಾಳದ ಜನತೆ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಮಾಡದ ನಾಯಕರನ್ನು ಪ್ರಶ್ನಿಸುವ ಕಾಲ ಬಂದಿದೆ ಎಂದು ನೇರ ಸವಾಲು ಹಾಕಿದ ಅವರು, ತಮ್ಮ ಶಾಸಕತ್ವದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಓಣಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಜು ಬಾಗೇವಾಡಿ, ಸಂಗನಗೌಡ ಪಾಟೀಲ್, ಪರಸುರಾಮ ನಾಲತವಾಡ, ಪ್ರಭು ಕಡಿ,ಗೀರಿಶ ಪಾಟೀಲ್,ಮದನಸ್ವಾಮಿ ಹೀರೆಮಠ, ಅಶೋಕ ಚಿನಿವಾರ,ಬಸಯ್ಯಾ ನಂದಿಕೇಶ್ವರಮಠ, ಹುಲಗೇಪ್ಪ ಕಿಲ್ಲಾರಹಟ್ಟಿ,ನಾಗೇಶ ಕವಡಿಮಟ್ಟಿ, ಪುನಿತ್ ಹಿಪ್ಪರಗಿ,ನೀಖಿಲ್ ಮಲಗಲದಿನ್ನಿ, ಶಿವು ಬಿರಾದಾರ,ಅನೀಲ ರಾಠೋಡ,ಶಿವು ಲದ್ದಿಮಠ, ಕೇಖಾ ಕೊಂಡಗೂಳಿ, ಗೌರಮ್ಮ ಹುನಗುಂದ,ಪಾರ್ವತಿ ಕುಂಬಾರ, ಪ್ರೀತಿ ಕುಂಬಾರ ಸೇರಿದಂತೆ ಇನ್ನೀತರರು ಪತ್ರಿಕಾಘೋಷ್ಠಿಯಲ್ಲಿ ಇದ್ದರು.

