ಬಹು ನಿರೀಕ್ಷಿತ ಬೆಂಗಳೂರು ಮತ್ತು ಮುಂಬೈ ನಗರಗಳ ನಡುವೆ ವಂದೇ ಭಾರತ್ ಸ್ಲೀಪರ್ ಟ್ರೈನ್ ಸಂಚಾರಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ತಾವು ಈ ರೈಲು ಓಡಿಸುವಂತೆ ರೈಲ್ವೆ ಸಚಿವ ಶ್ರೀ ಅಶ್ವಿನ್ ವೈಷ್ಣವ್ ಜಿ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಅದೇ ರೀತಿಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಶ್ರೀ ಪಿ.ಸಿ. ಮೋಹನ್ ಅವರು ಸಹ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ವಂದೇ ಭಾರತ್ ಸ್ಲೀಪರ್ ಟ್ರೈನ್ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದರು.
ಬೆಂಗಳೂರು – ಮುಂಬೈ ನಡುವೆ ಸುಮಾರು 976 ಕಿಲೋಮೀಟರ್ಗಳ ಅಂತರವಿದೆ. ಈ ಎರಡು ಮಹಾ ನಗರಗಳ ನಡುವೆ ಈಗ ಸಂಚರಿಸುವ ರೈಲುಗಳು 24 ರಿಂದ 30 ತಾಸುಗಳನ್ನು ತೆಗೆದುಕೊಳ್ಳುತ್ತವೆ. ಕಡಿಮೆ ಅವಧಿಯಲ್ಲಿ ಎರಡು ನಗರಗಳ ನಡುವೆ ಸಂಚರಿಸಲು ಅನುಕೂಲವಾಗುವಂತೆ ವಂದೇ ಭಾರತ್ ಸ್ಲೀಪರ್ ಟ್ರೈನ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಈಗ ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಟ್ರೈನ್ ಸಂಚಾರಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಈ ಟ್ರೈನ್ ಗಂಟೆಗೆ 220 ಕಿಮೀ ಚಲಿಸುತ್ತದೆ . ಇದರ ವೇಳಾಪಟ್ಟಿ, ಮಾರ್ಗ ಮತ್ತು ಯಾವ ದಿನಾಂಕದಿಂದ ವಂದೇ ಭಾರತ್ ಸ್ಲೀಪರ್ ಟ್ರೈನ್ ಸಂಚಾರ ಆರಂಭಿಸಲಿದೆ ಎನ್ನುವ ಮಾಹಿತಿಯನ್ನು ಸದ್ಯದಲ್ಲಿಯೇ ನೀಡುವುದಾಗಿ ಇಲಾಖೆ ತಿಳಿಸಿದೆ. ಹಾಗಾಗಿ ಶ್ರೀ ಬಾಬು ರಾವ್ ಅವರಿಂದ ರಾಜ್ಯದ, ಕಲ್ಯಾಣ ಕರ್ನಾಟಕ ಹಾಗೂ ಈ ಭಾಗದಲ್ಲಿ ಬರುವ ಆಂಧ್ರಪ್ರದೇಶ,ತೆಲಂಗಾಣ, ಮಹಾರಾಷ್ಟ್ರ ಜನರ ಪರವಾಗಿ ಮನವಿ ಏನೆಂದರೆ ಈ ರೈಲನ್ನು ಹುಬ್ಬಳ್ಳಿ ಮಾರ್ಗವಾಗಿ ಓಡಿಸಿದರೆ 17 ತಾಸು 10 ನಿಮಿಷ ಹಿಡಿಯುತ್ತದೆ, ಆದರೆ ಅದೇ ಗುಂತಕಲ್, ಮಂತ್ರಾಲಯ, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ್ ಮಾರ್ಗವಾಗಿ ಸಂಚರಿಸಿದರೆ 15 ತಾಸು 55 ನಿಮಿಷ ತೆಗೆದುಕೊಳ್ಳುತ್ತದೆ. ಅದಲ್ಲದೆ ಪ್ರಸ್ತುತ ಬೆಂಗಳೂರಿನಿಂದ ಮುಂಬೈ ಮಾರ್ಗವಾಗಿ 28 ವರ್ಷಗಳಿಂದ ಓಡಾಡುತ್ತಿರುವ ಉದ್ಯಾನ ಎಕ್ಸಪ್ರೆಸ್ ಒಂದೇ ಇದೆ. ಈ ಮಾರ್ಗದಲ್ಲಿ ನಡೆದರೆ ಗುಂತಕಲ್ ಹತ್ತಿರದ ಪ್ರಸಿದ್ಧ ಶ್ರೀ ಹನುಮಾನ ದೇವಸ್ಥಾನ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ರಾಯಚೂರು ಶ್ರೀ ಸುಗೂರೇಶ್ವರ, ಕಲ್ಲೂರು ಶ್ರೀ ಮಹಾಲಕ್ಷ್ಮಿ, ನಾರದಗಡ್ಡೆ ಶ್ರೀ ದತ್ತಾತ್ರೇಯ ದೇವಸ್ಥಾನ, ಕಲಬುರಗಿಯಲ್ಲಿ ಶ್ರೀ ಶರಣಬಸಪ್ಪ ದೇವಸ್ಥಾನ, ದತ್ತಪೀಠ ಹಾಗೂ ಬಂದೇನವಾಜ್, ಹಾಗೂ ಸೊಲಾಪೂರ ಸನಿಹದಲ್ಲಿ ಶ್ರೀ ಕೊಲ್ಲಾಪುರ ಮಹಾಲಕ್ಷ್ಮೀ ದೇವಸ್ಥಾನಗಳು ಬರುತ್ತವೆ, ಹಾಗಾಗಿ ರೈಲ್ವೆಗೆ ಹೆಚ್ಚಿನ ಆದಾಯ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದ್ದು ರೈಲ್ವೆ ಸಚಿವರು ನಮ್ಮ ಭಾಗದ ಮೂಲಕವೇ ಈ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿದ್ದಾರೆ.
ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಟ್ರೈನ್ ಸಂಚಾರ ಆರಂಭಿಸಿದರೆ ಇದು ರಾಜ್ಯದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *