ತಾಳಿಕೋಟಿ: ಮತಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿವ ನೀರು, ಸುಸಜ್ಜಿತ ರಸ್ತೆ, ಸಮರ್ಪಕ ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತುಕೊಟ್ಟು ಆದ್ಯತೆ ಮೇರೆಗೆ ಕೆಲಸ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ)ಹೇಳಿದರು. ಶುಕ್ರವಾರ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಹಂಚಲಿ ಗ್ರಾಮದಲ್ಲಿ ರೂ.50 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ರೂ.5 ಲಕ್ಷ ವೆಚ್ಚದ ಶ್ರೀ ಸೋಮನಾಥ ದೇವಸ್ಥಾನ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ಅನುದಾನ ಪಡೆಯುವಲ್ಲಿ ಸಾಕಷ್ಟು ತೊಂದರೆಗಳಿದ್ದರೂ ಶಕ್ತಿಮೀರಿ ಪ್ರಯತ್ನಿಸಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಗ್ರಾಮಗಳ ಅಭಿವೃದ್ಧಿ ಅಗತ್ಯವಾಗಿದೆ. ಅನುದಾನವನ್ನು ತಂದು ಹಂತ ಹಂತವಾಗಿ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಇಂದು ಈ ಗ್ರಾಮದ ಜೊತೆಗೆ ಕ್ಷೇತ್ರದ ತಿಳಗೂಳ ಗ್ರಾಮದಲ್ಲಿ ಮಾರುತೇಶ್ವರ ಮಠದ ಸಮುದಾಯ ಭವನಕ್ಕೆ 10 ಲಕ್ಷ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಮತ್ತು ಕಾಳಿಕಾದೇವಿ ದೇವಸ್ಥಾನ ಸಮುದಾಯ ಭವನಕ್ಕೆ 5 ಲಕ್ಷ, ಕೆರೂಟಗಿ ಗ್ರಾಮದ ಲಕ್ಷ್ಮಿ ದೇವಸ್ಥಾನ ಸಮುದಾಯ ಭವನಕ್ಕೆ 5 ಲಕ್ಷ, ಸಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ, ವರ್ಕ್ನಹಳ್ಳಿ ಗ್ರಾಮದ ಸಿಸಿ ರಸ್ತೆಗೆ 50 ಲಕ್ಷ, ಹಿರೊಡೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ 10 ಲಕ್ಷ ಹಾಗೂ ಕೋರವಾರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 1 ಕೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 266 ಲಕ್ಷ ಹಾಗೂ ವಿವಿಧ ಸಮುದಾಯಗಳ ಭವನಗಳ ನಿರ್ಮಾಣಕ್ಕೆ 15 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು ಎಂದು ತಿಳಿಸಿದ ಅವರು ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಜೆಜೆಎಂ ಯೋಜನೆಯ ಕೆಲಸ ಮುಕ್ತಾಯಗೊಂಡಿದ್ದು ಆದಷ್ಟು ಬೇಗ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಕೆಲವು ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆಗಾಗಿ ಬೋರವೆಲ್ ಗಳನ್ನು ಬಳಸಿಕೊಳ್ಳಲಾಗುವುದು ಎಂದ ಅವರು ಕಳೆದ ಮೂರು ವರ್ಷಗಳಿಂದ ನೀವು ನನ್ನೊಂದಿಗೆ ಸಹಕರಿಸಿದ್ದೀರಿ ನಿಮ್ಮ ಸಹಕಾರ ಇದೇ ರೀತಿ ಮುಂದೆಯೂ ಇರಲಿ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದಹಾಗೆ ಕೆಲಸ ಮಾಡುತ್ತೇನೆ ಎಂದರು. ಮುಖಂಡ ಶರಣಬಸ್ಸು ಇಟಗಿ ಮಾತನಾಡಿ ಶಾಸಕರು ಮಾತು ಕೊಟ್ಟಂತೆ ಕೆಲಸ ಮಾಡಿದ್ದಾರೆ ನಮ್ಮ ಗ್ರಾಮಕ್ಕೆ ನೀರಿನ ತೊಂದರೆ ಇದೆ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಅವರಿಗೆ ನಾನು ಗ್ರಾಮಸ್ಥರು ಪರವಾಗಿ ಅಭಿನಂದಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ ಹಾಗೂ ಮುಖಂಡ ಶೇಖರಗೌಡ ಪಾಟೀಲ(ಕೋರವಾರ) ಇವರನ್ನು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಮುಖಂಡರಾದ ವಿಜಯಕುಮಾರ ಹಿರೇಮಠ, ದೊಡ್ಡಯ್ಯ ಹಿರೇಮಠ,ಕಲ್ಲಪ್ಪ ಹೊಸಮನಿ, ಮಹೇಶ ಬಾಗೇವಾಡಿ, ಸೋಮು ಹಟ್ಟಿ, ರಾಮನಗೌಡ ಹಚ್ಚಾಳ,ಬಾಬು ತೈನೂರ, ಸಂತೋಷ್ ಸಜ್ಜನ,ಕೆ.ಆರ್. ಐ.ಡಿ.ಎಲ್.ನ ಪ್ರಫುಲಕುಮಾರ,ಸಾಹೇಬಗೌಡ ಬಿರಾದಾರ, ಮಹಾಂತೇಶ ಹಾಗೂ ಗ್ರಾಮಸ್ಥರು ಇದ್ದರು.

