ತಾಳಿಕೋಟಿ: ಸಮಾಜದಲ್ಲಿ ದೌರ್ಜನ್ಯ,ಶೋಷಣೆ ಹಾಗೂ ತುಳಿತಕ್ಕೆ ಒಳಗಾದ ಜನಾಂಗಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ.ಬಾಬು ಜಗಜೀವನ ರಾಮ್ ಅವರ ಬದುಕಿನ ಆದರ್ಶಗಳು ನಮಗೆಲ್ಲರಿಗೂ ಮಾದರಿ ಆಗಬೇಕಾಗಿದೆ ಎಂದು ಶಿಕ್ಷಕಿ ಸಾಹಿತಿ ಮಡಿವಾಳಮ್ಮ ಎಸ್ ಜಿ ನಾಡಗೌಡ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕಾ ಪಂಚಾಯತ,ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಜಗಜೀವನ ರಾಮ್ ಅವರು 30 ವರ್ಷಗಳ ಕಾಲ ಉತ್ತಮ ಸಂಸದ ಸದಸ್ಯರಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡಿದರು ದೇಶದ ಅತ್ಯುನ್ನತ ಉಪ ಪ್ರಧಾನಿ ಸ್ಥಾನದವರೆಗೆ ಏರಿದರು ಈ ಸ್ಥಾನ ಅವರಿಗೆ ಸಿಕ್ಕಿದ್ದು ಅವರಲ್ಲಿದ್ದ ಅಪಾರ ಪಾಂಡಿತ್ಯ ಹಾಗೂ ಪ್ರತಿಭೆಯಿಂದಾಗಿ ಇಂತಹ ಮಹನೀಯರ ತತ್ವಾದರ್ಶ ಹಾಗೂ ವಿಚಾರಗಳು ಸರ್ವಕಾಲಿಕವಾಗಿವೆ ಅವುಗಳ ಪ್ರಾಮಾಣಿಕ ಅನುಸರಣೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಮಾತನಾಡಿ ಭಾರತದ ಇತಿಹಾಸದಲ್ಲಿ ಇಬ್ಬರು ಮಹಾನ್ ನಾಯಕರಾದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರು ಸದಾ ಸ್ಮರಣೀಯರಾಗಿದ್ದಾರೆ ಅವರ ಇಡೀ ಬದುಕು ಹೋರಾಟದಿಂದ ಕೂಡಿದೆ ಅದನ್ನು ತಿಳಿದುಕೊಳ್ಳುವ ಅಗತ್ಯವಿದೆ ಕೇವಲ ಜಯಂತಿ ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ಮೈಗುಡಿಸಿಕೊಳ್ಳುವ ಅಗತ್ಯವಿದೆ ಎಂದರು. ಸಮಾಜದ ಮುಖಂಡರಾದ ಡಿ.ಬಿ.ಹಾದಿಮನಿ, ಗೋಪಾಲ ಕಟ್ಟಿಮನಿ ಹಾಗೂ ರಾಮಣ್ಣ ಕಟ್ಟಿಮನಿ ಮಾತನಾಡಿದರು. ತಹಸಿಲ್ದಾರ್ ಗ್ರೇಡ್-2 ಪ್ರದೀಪ ದೇವಗಿರಿಕರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಚೊಕಾವಿ ಗ್ರಾಮದ ಪ್ರಗತಿಪರ ರೈತ ಹಣಮಂತ್ರಾಯ ನಾಟಿಕರ್ ಇವರನ್ನು ತಾಲೂಕಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಡಾ.ಶ್ರೀಶೈಲ ಹುಕ್ಕೇರಿ, ಸಮಾಜ ಕಲ್ಯಾಣ ಇಲಾಖೆಯ ಶಿವಲಿಂಗಪ್ಪ ಹಚಡದ,ಪಿಎಸ್ಐ ಜ್ಯೋತಿ ಖೋತ, ಮಹೇಶ ಜೋಶಿ, ರಾಜು ವಿಜಾಪುರ, ಯಮನಪ್ಪ ಕಟ್ಟಿಮನಿ, ಬಸ್ಸು ಮಾದರ,ಸಂಜೀವಪ್ಪ ಬರದೇನಾಳ, ಆಸೀಫ ಕೆಂಭಾವಿ, ಮಹಮ್ಮದ್ ಶಫೀಕ್ ಇನಾಮದಾರ, ರಾಹುಲ್ ರಜಪೂತ, ಮಾದೇವ ಚಟ್ನಳ್ಳಿ (ಅಸ್ಕಿ),ದೇವಪ್ಪ ಮಾದರ(ತುಂಬಗಿ), ಶೇಕಪ್ಪ ಹೋಳಗಿ (ಚಬನೂರ), ಕಾಳಪ್ಪ ಮಾದರ(ಮಿಣಜಗಿ), ಶಿವಪ್ಪ ಕಟ್ಟಿಮನಿ(ಕಾರಗನೂರ), ಪರಶುರಾಮ ಮಾದರ, ಬಾಗಪ್ಪ ಮಸ್ಕನಾಳ, ದ್ಯಾಮಣ್ಣ ಸೋಮನಾಳ(ಕೊಣ್ಣೂರ), ಯಮನಪ್ಪ ಕೆಸರಟ್ಟಿ (ಬಿ.ಸಾಲವಾಡಗಿ), ಮಹಾಂತೇಶ ತಾಳಿಕೋಟಿ,ಎಸ್.ಎನ್. ಮಲ್ಲಾಡೆ,ಎನ್.ವಿ.ಕೋರಿ,ಎಸ್.ಎಂ. ಕಲಬುರ್ಗಿ, ಮುನ್ನಾ ಅತ್ತಾರ, ತಾಲೂಕ ಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಸಮಾಜದ ಪ್ರಮುಖರು ಮತ್ತಿತರರು ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

Leave a Reply

Your email address will not be published. Required fields are marked *