ರಾಮದುರ್ಗ: ಭಾರತದ ಭವಿಷ್ಯದ ಹತ್ತು ವರ್ಷಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯ ದತ್ತಾಂಶವು ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮನೆ ಅಥವಾ ಕುಟುಂಬವು ಗಣತಿಯಿಂದ ಹೊರಗುಳಿಯದಂತೆ ಸಿಬ್ಬಂದಿಗಳು ಜಾಗೃತಿ ವಹಿಸಬೇಕು ಎಂದು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರು ಕರೆ ನೀಡಿದರು.ಇಲ್ಲಿನ ಐ.ಎಸ್‌. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣತಿದಾರರು ಮತ್ತು ಮೇಲ್ವಿಚಾರಕರ 9 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ತಾಲ್ಲೂಕಿನ ಗ್ರಾಮೀಣ ವ್ಯಾಪ್ತಿಯ 451 ಗಣತಿದಾರರು, 80 ಮೇಲ್ವಿಚಾರಕರು ಹಾಗೂ ಪಟ್ಟಣ ವ್ಯಾಪ್ತಿಯ 74 ಗಣತಿದಾರರು ಮತ್ತು 13 ಮೇಲ್ವಿಚಾರಕರು ಸೇರಿದಂತೆ ಒಟ್ಟು 798 ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.ಜನಗಣತಿ ಕಾರ್ಯಕ್ರಮವನ್ನು ದೋಷರಹಿತವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಲು ಸಿಬ್ಬಂದಿಗಳಿಗೆ ಅಗತ್ಯ ತಾಂತ್ರಿಕ ಮತ್ತು ಪ್ರಾಯೋಗಿಕ ಜ್ಞಾನ ನೀಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ.ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಪ್ರತಿಯೊಬ್ಬ ಮತದಾರರನ್ನು ಹಾಗೂ ನಿವಾಸಿಗಳನ್ನು ಕಟ್ಟುನಿಟ್ಟಾಗಿ ಗಣತಿಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರರು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಮಾಸ್ಟರ್ ಟ್ರೇನರ್‌ಗಳಾದ ಎ.ವಿ. ಪಾಟೀಲ, ಸುರೇಶ ಅಣ್ಣಿಗೇರಿ, ಪ್ರಕಾಶ ತೆಗ್ಗಿಹಳ್ಳಿ, ಮಂಜುಳಾ ಮೂಡ್ಲವರ, ಎಂ.ಎನ್‌. ಭಜಂತ್ರಿ ಹಾಗೂ ಎಸ್.ಐ. ಹೊಸೂರ ಉಪಸ್ಥಿತರಿದ್ದರು. ಸುರೇಬಾನ ಕಂದಾಯ ನಿರೀಕ್ಷಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *