ತಾಳಿಕೋಟಿ: ದೇಶದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ತಹಸಿಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್ 5 ರಂದು ಡಾ.ಬಾಬು ಜಗಜೀವನರಾಂ ಅವರ 119ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಈಗಿನಿಂದಲೇ ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಏಪ್ರಿಲ್ 5ರಂದು ಬೆಳಿಗ್ಗೆ 9 ಘಂಟೆಗೆ ಜಗಜೀವನ್ ರಾಮ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯು ತಹಸಿಲ್ದಾರ್ ಕಾರ್ಯಾಲಯದಿಂದ ಆರಂಭವಾಗಿ ಬಸ್ ನಿಲ್ದಾಣ ಮಾರ್ಗ, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಶಿವಾಜಿ ಸರ್ಕಲ್, ಕತ್ರಿ ಬಜಾರ್, ಅಂಬಾ ಭವಾನಿ ದೇವಸ್ಥಾನ ರಸ್ತೆ, ಡಾ. ಅಂಬೇಡ್ಕರ್ ಸರ್ಕಲ್, ಶ್ರೀ ಬಸವೇಶ್ವರ ವೃತ್ತದಿಂದ ಕನ್ನಡ ಶಾಲೆ ಮೈದಾನದವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಸಮಾಜದ ಪ್ರಮುಖರು ಪಟ್ಟಣದ ಗಣ್ಯರು ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಳಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ ಅವರು ಮೆರವಣಿಗೆ ನಂತರ ಬೆಳಿಗ್ಗೆ 11:30ಕ್ಕೆ ಕನ್ನಡ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ವಿಶೇಷ ಉಪನ್ಯಾಸ ಹಾಗೂ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತಿತರ ಕಾರ್ಯಕ್ರಮಗಳು ನೆರವೇರಲಿವೆ. ಶಿಷ್ಟಾಚಾರದಂತೆ ಆಮಂತ್ರ ಪತ್ರಿಕೆ ಮುದ್ರಣ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆಯೂ ಸದರಿ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿ ಭಾಗವಹಿಸುವಂತೆ ಅವರು ಸೂಚನೆ ನೀಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಜಿ.ಮಠ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸಮಾಜದ ಮುಖಂಡರಾದ ಡಿ.ಬಿ.ಹಾದಿಮನಿ, ಬಸ್ಸು ಮಾದರ, ಅಸ್ಕಿ ಮಾದೇವ ಹಾಗೂ ಗೋಪಾಲ ಕಟ್ಟಿಮನಿ ಕಾರ್ಯಕ್ರಮ ಯಶಸ್ವಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ, ಪಿಎಸ್ಐ ಜ್ಯೋತಿ ಖೋತ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಶಿರಸ್ತೆದಾರ ಜೆ.ಆರ್.ಜೈನಾಪೂರ, ಸಮಾಜದ ಪ್ರಮುಖರಾದ ಯಮನಪ್ಪ ಕಟ್ಟಿಮನಿ, ಪರಸಪ್ಪ ತಾಳಿಕೋಟಿ, ಮಹಾದೇವಪ್ಪ ಎಂಟಮಾನ, ಯಮನಪ್ಪ ನಾಯ್ಕೋಡಿ, ಬಸವರಾಜ ತೋಟದ, ದೇವಪ್ಪ ತುಂಬಗಿ, ಭಾಗಣ್ಣ ಮಸ್ಕನಾಳ, ಪರಶುರಾಮ ಕಟ್ಟಿಮನಿ, ರಮೇಶ ಮಾದರ, ಕಾಶಿನಾಥ ಕಟ್ಟಿಮನಿ, ದುರ್ಗೇಶ ವಂದಗನೂರ, ಯಮನಪ್ಪ ಶಿವಪೂರ, ಶೇಕಪ್ಪ ಕಾರಗನೂರ, ಶಿವು ವನಹಳ್ಳಿ,ಅಂಬರೀಶ್ ಪೀರಾಪೂರ, ಮಾನಪ್ಪ ಹಿರೂರ, ಕಾಳಪ್ಪ ಮಿಣಜಗಿ, ಪರಸಪ್ಪ ತಾಳಿಕೋಟಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *