ಮುದ್ದೇಬಿಹಾಳ: ತಾಲ್ಲೂಕಿನ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಕೀರ್ತಿ ಚಾಲಕ ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಮುದಾಯ ಭವನದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಜೂನ್ ತಿಂಗಳವರೆಗೆ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಎ.ಎಲ್. ರಾಠೋಡ್ ಅವರ ಕಾರ್ಯವೈಖರಿ ಕುರಿತು ತಹಶೀಲ್ದಾರರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ರಾಠೋಡ್ ಮಾತನಾಡಿ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ ಎಂದು ತಿಳಿಸಿದರು. ಹಣಕಾಸಿನ ಅಡಚಣೆಗಳಿದ್ದರೂ ಸಾರ್ವಜನಿಕರಿಗೆ ನೀರಿನ ತೊಂದರೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಬಸರಕೋಡ ಬಹುಹಳ್ಳಿ ಯೋಜನೆಯಿಂದ ಢವಳಗಿ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ವಿಷಯವನ್ನು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಚವನಭಾವಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.
ರಕ್ಕಸಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲದಿನ್ನಿ ಹಾಗೂ ಕಾರಕೂರ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇರುವುದಾಗಿ ತಿಳಿಸಲಾಯಿತು. ತಂಗಡಗಿ ಬಹುಹಳ್ಳಿ ಯೋಜನೆಯಿಂದ ಕಳೆದ ಮೂರು ವರ್ಷಗಳಿಂದ ಈ ಗ್ರಾಮಗಳಿಗೆ ನೀರು ಸರಬರಾಜಾಗಿಲ್ಲ ಎಂದು ಪಿಡಿಒ ಮಾಲಾಶ್ರೀ ಅಮ್ಮಣ್ಣವರು ಮಾಹಿತಿ ನೀಡಿದರು. ಇದಕ್ಕೆ ತಾಲೂಕು ಪಂಚಾಯತಿ ಇಒ ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದರು.
ಚವನಭಾವಿ ಗ್ರಾಮದಲ್ಲಿ ಹೊಸ ಕೊಳವೆಬಾವಿ ಕೊರೆಯಲಾಗಿದ್ದರೂ ನೀರು ಸಿಗದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಮಡಿಕೇಶ್ವರ ಹಾಗೂ ತಾರನಾಳ ಗ್ರಾಮಗಳಲ್ಲಿ ಮೋಟಾರ್ ಮತ್ತು ಪೈಪ್‌ಲೈನ್ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಬೇಕು. ಕವಡಿಮಟ್ಟಿ ಹಾಗೂ ಸರೂರ ಗ್ರಾಮಗಳಿಗೆ ಬಹುಹಳ್ಳಿ ಯೋಜನೆಯ ನೀರು ಪೂರೈಕೆಯಾಗುತ್ತಿಲ್ಲ ಎಂದು ಪಿಡಿಒ ಕೆ.ಎಚ್. ಕುಂಬಾರ ವಿವರಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಆರ್.ಎಸ್. ಹಿರೇಗೌಡರ, ಡಾ. ಸತೀಶ್ ತಿವಾರಿ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ, ನಾಲತವಾಡ ಉಪತಹಶೀಲ್ದಾರ ಎನ್.ಬಿ. ಮಾವಿನಮಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *