ಮುದ್ದೇಬಿಹಾಳ: ಅಡುಗೆ ಅನಿಲದ ದರ ಏರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಘಟಕಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವುದರಿಂದ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಿಗೆ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಬಡವರ ಪರವಾಗಿಲ್ಲ. ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಗೃಹಬಳಕೆಯ ಗ್ಯಾಸ್ ದರ ಹೆಚ್ಚಳದಿಂದ ಜನಸಾಮಾನ್ಯರ ಬದುಕಿಗೆ ಹೆಚ್ಚುವರಿ ಹೊರೆ ಆಗುತ್ತಿದೆ ಎಂದು ಆರೋಪಿಸಿದರು.
ಮುದ್ದೇಬಿಹಾಳ ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಅಕ್ಷತಾ ಚಲವಾದಿ ಮಾತನಾಡಿ, ಬೆಲೆ ಏರಿಕೆಯಿಂದ ಗೃಹಿಣಿಯರು ಮನೆ ಖರ್ಚು ನಿರ್ವಹಿಸುವುದು ಕಷ್ಟವಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಸವರಾಜ ಬಂಜೆತ್ರಿ, ಮಹಿಳಾ ಕಾಂಗ್ರೆಸ್ ನಾಯಕಿ ಸುಜಾತಾ ಶಿಂಧೆ, ಮುದ್ದೇಬಿಹಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪಾಟೀಲ್, ಮಹಾಬುಬಿ ಬಾಗವಾನ ಸೇರಿದಂತೆ ಹಲವು ಮುಖಂಡರು ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಿತ ಸದಸ್ಯ ರಫೀಕ್ ಶಿರೋಳ, ಸಮೀರ್ ದ್ರಾಕ್ಷಿ, ರಾಮಣ್ಣಾ ನಾಯಕಮಕ್ಕಳ, ಅಬೂಬಕರ್ ಹಡಗಲಿ, ಕೈಯ್ಯೂಮ್ ಮೊಮಿನ್, ಬಸವರಾಜ ಚಲವಾದಿ, ಚಂದ್ರು ಚಲವಾದಿ, ಯಮನಪ್ಪ, ಅಭಿ ಕಲಾಲ, ಅಬ್ದುಲ್ ಸಲಾಂ ಮುಲ್ಲಾ, ಬಂದು ಮ್ಯಾಗೇರಿ, ಮಂಜುನಾಥ ಮುರಾಳ, ಪ್ರದೀಪ್ ರಾಠೋಡ್, ಇನಾಯತ್ ಮೊಮಿನ್, ರಾಜು ಪಾಟೀಲ್, ಶೇಖರ್ ಬಿರಾದಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅದೇ ರೀತಿ ಮಹಿಳಾ ಕಾಂಗ್ರೆಸ್ ನಾಯಕಿಯರಾದ ಶೋಭಾ ಶೇಳ್ಳಗಿ, ಕಮಲಾ ಬಂಜೆತ್ರಿ, ನೀಲಮ್ಮ ಚಲವಾದಿ, ಮಮ್ತಾಜ್ ಮುಲ್ಲಾ, ಶಿವಲೀಲಾ ಬಸರಕೋಡ, ಹೀನಾ ಮೂಲಿಮನಿ, ಹಸೀನಾ ನಿಡಗುಂದಿ, ಹಫೀಜಾ ಜಮಾದಾರ, ನೀಲಮ್ಮ ಮಹಾಲಿಂಗಪುರ, ದೇವಮ್ಮ ಹುಣಕುಂಟಿ, ಮಾಹಬೂಬಿ ನಾಯ್ಕೋಡಿ, ಬಸಮ್ಮಾ ಯರಗಲ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *