ಚಂದ್ರಶೇಖರ ಪಾಟೀಲ್ ಮೈದಾನದಲ್ಲಿ ಭಾನುವಾರ ನಡೆದ ವನಿತಾ ಐಟಿಎಫ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅವರು ಸಿಂಗಲ್ಸ್ ಫೈನಲ್‌ನಲ್ಲಿ ತಾರಾ ಆಟಗಾರ್ತಿ ಅಂಕಿತಾ ರೈನಾ ವಿರುದ್ಧ 7 6 (3), 6 4 ಅಂತರದ ಜಯ ಸಾಧಿಸಿದರು.
ಇದು ವೈಷ್ಣವಿ ಅಡ್ಕರ್‌ಗೆ ವೃತ್ತಿ ಬದುಕಿನಲ್ಲಿ ಲಭಿಸಿದ 2ನೇ ಐಟಿಎಫ್ ಸಿಂಗಲ್ಸ್ ಫೈನಲ್ ಪ್ರಶಸ್ತಿ. ಇದಕ್ಕೂ ಮುನ್ನ ಇದೇ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಐಟಿಎಫ್ ಪಂದ್ಯಾವಳಿಯಲ್ಲೂ ಗೆದ್ದಿದ್ದರು. ಇದೇ ಕೂಟದ ಡಬಲ್ಸ್‌ನಲ್ಲಿ ಅಂಕಿತಾ ರೈನಾ ಮತ್ತು ವೈಷ್ಣವಿ ಅಡ್ಕರ್ ಜೋಡಿಯೇ ಪ್ರಶಸ್ತಿ ಗೆದ್ದಿತ್ತು ಎನ್ನುವುದು ವಿಶೇಷ.
33 ವರ್ಷದ ಅನುಭವಿ ಆಟಗಾರ್ತಿ ಅಂಕಿತಾ ರೈನಾ ಆರಂಭಿಕ ಸೆಟ್‌ನಲ್ಲಿ ಭರ್ಜರಿ ಪೈಪೋಟಿ ನೀಡಿದರು. ಇದಕ್ಕೆ ಸಾಕ್ಷಿಯಾಗಿ ಸೆಟ್ 7 6 (3)ಕ್ಕೆ ಸಾಗಿತು. 2ನೇ ಸೆಟ್‌ನಲ್ಲೂ ಇದೇ ರೀತಿಯ ಪೈಪೋಟಿ ಸಾಗಿತಾದರೂ ಇಲ್ಲೂ ಅಡ್ಕರ್ ಮೇಲುಗೈ ಸಾಧಿಸಿದರು. ಇಬ್ಬರ ಮಧ್ಯೆ 2 ಗಂಟೆ, 14 ನಿಮಿಷಗಳ ಸೆಣಸಾಟ ಸಾಗಿತು. 21 ವರ್ಷದ ಪುಣೆ ಆಟಗಾರ್ತಿ ಅಡ್ಕರ್ ರೈನಾಗಿಂತ 12 ವರ್ಷ ಚಿಕ್ಕವರು.
ಅಡ್ಕರ್‌ಗೆ 4 ಲಕ್ಷ ಬಹುಮಾನ:
ಪ್ರಶಸ್ತಿ ಗೆದ್ದಿರುವ ವೈಷ್ಣವಿ ಅಡ್ಕರ್ 4.46 ಲಕ್ಷ ರೂ. ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಇಲ್ಲಿ ರನ್ನರ್‌ಅಪ್ ಆಗಿರುವ ಅಂಕಿತಾ ರೈನಾ 2.42 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.

