ಶರಣಬಸವೇಶ್ವರ 204ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕಲಬುರಗಿಯ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳು-ವ್ಯಾಪಾರಿಗಳು, ರಾಜಕೀಯ ಮುಖಂಡರು ಅನ್ನದಾಸೋಹ ಮಾಡಿ ತರಹೇವಾರಿ ಭಕ್ಷ್ಯಗಳನ್ನು ಉಣಬಡಿಸಿದರು.
ನೀರು, ಮಜ್ಜಿಗೆ, ಶರಬತ್, ಕಲ್ಲಂಗಡಿ, ಬಾಳೆ, ದ್ರಾಕ್ಷಿ, ಖರ್ಜೂರ, ಕಬ್ಬಿನ ಹಾಲು ಇತ್ಯಾದಿಗಳ ‘ದಾಸೋಹ’ವು ನೆತ್ತಿ ಸುಡುವ ಬಿಸಿನಲ್ಲಿ ಭಕ್ತರ ಮನ-ಹೊಟ್ಟೆ ಎರಡನ್ನೂ ತಣಿಸಿದವು.ಸರ್ದಾರ್ ಪಟೇಲ್ ವೃತ್ತದಿಂದ ಹಿಡಿದು ದೇವಸ್ಥಾನದ ತನಕ, ಅಪ್ಪ ಕೆರೆಯ ವಿಜ್ಞಾನ ಕೇಂದ್ರದಿಂದ ಗೋವಾ ಹೋಟೆಲ್ ತನಕ, ಲಾಲಗೇರಿ ಕ್ರಾಸ್‌ನಿಂದ ದೇವಸ್ಥಾನದ ತನಕ ಅಕ್ಷರಶಃ ಭಕ್ತರನ್ನು ಕರೆ-ಕರೆದು ‘ದಾಸೋಹ’ ಸೇವೆಗೈದರು. ಎಸ್‌ಬಿ ಟೆಂಪಲ್ ರಸ್ತೆಯ ಮೋದಿ ಹಾಸ್ಪಿಟಲ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಜಿಲ್ಲೆ ಅಷ್ಟೇ ಅಲ್ಲದೆ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಪಾದಯಾತ್ರೆ ಮೂಲಕ ದೇಗುಲಕ್ಕೆ ಆಗಮಿಸಿದರು. ಬೆಲ್ಲ, ಅಕ್ಕಿ ಸೇರಿದಂತೆ ಧಾನ್ಯಗಳನ್ನು ದಾಸೋಹಕ್ಕಾಗಿ ಅರ್ಪಿಸಿದರು.

