ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಪೂಜಾ ಕೈಂಕರ್ಯ ಸೋಮವಾರ ಜರುಗಿತು. ನಾವದಗಿ ಗ್ರಾಮದ ಮೂಲ ಬ್ರಹನ್ಮಠದಲ್ಲಿರುವ ಲಿಂಗೈಕ್ಯ ಶ್ರೀ ರಾಜ ಗುರು ಪರ್ವತೇಶ್ವರರ ಕರ್ತೃ ಗದ್ದುಗೆ ಶ್ರೀ ಮಠದ ಪೀಠಾಧಿಪತಿಗಳಾದ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಗ್ರಾಮದ ಸಮಸ್ತ ಭಕ್ತರ ಸಮ್ಮುಖದಲ್ಲಿ ಈ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು ಕಳೆದ 20 ದಿನಗಳಿಂದ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀ ಮಠದಲ್ಲಿ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ ಇಂದು ಸಮಾರೋಪವಾಗಿ ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಜ್ಜಲಗುಡ್ಡ ಹಿರೇಮಠದ ಸಂತೋಷ ಶಾಸ್ತ್ರಿಗಳು ಹಾಗೂ ಮೈಲೇಶ್ವರ ಹಿರೇಮಠದ ವೀರೇಶ ಶಾಸ್ತ್ರಿಗಳು ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೋತ್ಸವವಾಗಿ ನೆರವೇರಿಸಿದರು. ಪೂಜಾ ಕಾರ್ಯಕ್ರಮಗಳಲ್ಲಿ ನಾವದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿ ಪುನೀತರಾದರು.

Leave a Reply

Your email address will not be published. Required fields are marked *