ಮಾನ್ವಿ : ವಿಜ್ಞಾನದ ಹೊಸ ಹೊಸ ಸಂಶೋಧನೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೇಶದ ಉತ್ತಮ ನಾಗರಿಕರಾಗಬೇಕು ಎಂದು ವಿಶ್ವ ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗೀತಾ ಹಿರೇಮಠ ಹೇಳಿದರು. ಅವರು ವಿಶ್ವ ಚೇತನ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಜಗತ್ತು ಬಹಳ ಹತ್ತಿರವಾಗಿದೆ. ಸರ್ ಸಿ.ವಿ. ರಾಮನ್ ಅವರ ರಾಮನ್ ಪರಿಣಾಮದ ಆವಿಷ್ಕಾರದಿಂದ ವಿಶ್ವ ಭಾರತದತ್ತ ತಿರುಗಿ ನೋಡುವಂತಾಯಿತು ಎಂದು ಅವರ ಸಾಧನೆಯನ್ನು ಸ್ಮರಿಸಿದರು. ವಿಜ್ಞಾನ ಶಿಕ್ಷಕಿ ಗಾಯತ್ರಿ ಮಾತನಾಡಿ, ಸರ್ ಸಿ.ವಿ. ರಾಮನ್ ಅವರ ಜೀವನ ಮತ್ತು ಅವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಜ್ಞಾನ ಶಿಕ್ಷಕಿ ಅಪ್ಸರಾ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಮಾದರಿಗಳ ಕುರಿತು ವಿವರಿಸಿದರು.

ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿವೇದಿತಾ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯವನ್ನು ತಿಳಿಸಿದರು. ವಿದ್ಯಾರ್ಥಿನಿ ದ್ರಾಕ್ಷಾಯಣಿ ರಾಮನ್ ಪರಿಣಾಮದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಚಿನ್ಮಯಿ ಹಿರೇಮಠ ಪ್ರಾರ್ಥಿಸಿದರು. ಶಿಕ್ಷಕಿ ಮಾಧುರಿ ಸ್ವಾಗತಿಸಿದರು. ಮುಖ್ಯಗುರು ನಂದಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅಕ್ಷತಾ, ಚೈತ್ರಾ, ಸುಮೀರಾ, ಬಸಮ್ಮ ಉಪಸ್ಥಿತರಿದ್ದರು. ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.

Leave a Reply

Your email address will not be published. Required fields are marked *