ಮಾನ್ವಿ- ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವ ಜನಪದ ಸಾಹಿತ್ಯ ನಮ್ಮ ಸಂಸ್ಕೃತಿಯ
ಜೀವಂತ ಸಂಪತ್ತು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ಸಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಮಾನ್ವಿ ಪಟ್ಟಣದ ಕಲ್ಮಠದ ಕೆ.ಪಿ.ಎಸ್.ಎಸ್. ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿರುವ 2025-26 ನೇ ಸಾಲಿನ ವಿಶೇಷ ಶಿಬಿರದಲ್ಲಿ “ಜನಪದ ಸಾಹಿತ್ಯದ ಪ್ರಸ್ತುತತೆ ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಾಮಾಜಿಕ ಬಾಂಧವ್ಯ ಬಲಪಡಿಸುವ ಸಾಧನವಾಗಿರುವ ಮೌಖಿಕ ಪರಂಪರೆಯ ಮೂಲಕ ಹರಿದು ಬಂದ ಈ ಜನಪದ ಹಾಡುಗಳು ಗ್ರಾಮೀಣ ಬದುಕಿನ ನೈಜ ಪ್ರತಿಫಲನಗಳಾಗಿವೆ.
ಮಾನವೀಯ ಸಂಬಂಧಗಳು, ನೈತಿಕತೆಯ ನಡತೆ, ಸಹಬಾಳ್ವೆ ನೆನೆಪಿಸುವಲ್ಲಿ ಜನಪದ ಸಾಹಿತ್ಯ ಪ್ರಸ್ತುತವಾಗಿದೆ.
ಗ್ರಾಮೀಣ ಜನಜೀವನ ಪ್ರತಿಬಿಂಬಿಸುವ ಜನಪದ ಸಾಹಿತ್ಯದಲ್ಲಿ ಸಮಗ್ರ ಜೀವನಾನುಭವವಿದೆ,
ನೈತಿಕ ಜೀವನದ ಪರಿಣಾಮಕಾರಿ ಪಾಠವಿದೆ, ಸುಂದರ ಬದುಕಿನ ಸೂತ್ರಗಳಿವೆ, ಬದುಕಿಗೆ ಗೌರವ ತಂದು ಕೊಡುವ, ನಮ್ಮೆಲ್ಲರ ಬಾಳನ್ನು ಬೆಳಗಿಸುವ ಸದ್ಗುಣಗಳ, ಉನ್ನತ ಆದರ್ಶಗಳ ಜ್ಞಾನದ ರಾಶಿಯೇ ಜನಪದ ಸಾಹಿತ್ಯದಲ್ಲಿ ಅಡಕವಾಗಿದೆ ಎಂದ ಯಾಳಗಿ ಅವರು ಜಾನಪದ ಭೂತಕಾಲದ ಪ್ರತಿಧ್ವನಿಯಾಗಿರುವಂತೆ ವರ್ತಮಾನ ಕಾಲದ ಕಸುವುಳ್ಳ ಧ್ವನಿಯು ಆಗಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಠ ಪದವಿ ಕಾಲೇಜಿನ ಪ್ರಾಚಾರ್ಯ ಸಿದ್ದನಗೌಡ ಪಾಟೀಲ ವಹಿಸಿದ್ದರು.
ಊರಿನ ಪ್ರಮುಖರಾದ ಕುರುಮಯ್ಯ, ಅಮೀರ್ ಖಾನ್, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಆನಂದ ಉಪ್ಪಳ, ಉಪನ್ಯಾಸಕ ಸಿದ್ದೇಶ್ ಪೋಲಿಸ್ ಪಾಟೀಲ ಜಾಲವಾಡಗಿ, ಉಪನ್ಯಾಸಕಿ ಲಕ್ಷೀ ನಸಲಾಪುರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ಸಂಗೀತಾ ವರದಿ ವಾಚಿಸಿದರು, ಈರೇಶಮ್ಮ ಸ್ವಾಗತಿಸಿದರು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

