ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರವು ಕೂಡ ಇದ್ದು, ಮಕ್ಕಳು ಮುಕ್ತವಾಗಿ ಪಾಲ್ಗೊಂಡಾಗ ಸಾಕಷ್ಟು ಬಾಲ್ಯವಿವಾಹಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ’ ಎಂಬ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹದಂತಹ ಪ್ರಕರಣಗಳಲ್ಲಿ ಮಕ್ಕಳು ಸ್ವಯಂ ಆಗಿ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮ ಶಾಲಾ ಸಹಪಾಠಿಗಳು, ನೆರೆ-ಹೊರೆಯ ಅಥವಾ ಸಂಬಂಧಿಕರ ಮಕ್ಕಳ ಮದುವೆ 18 ವರ್ಷಕ್ಕಿಂತ ಮುಂಚಿತವಾಗಿ ನಡೆಯುತ್ತಿದೆ ಎಂದು ತಿಳಿದ ತಕ್ಷಣ 1098 ಅಥವಾ 112 ಗೆ ಕರೆ ಮಾಡಿ ರಕ್ಷಣೆಗೆ ಮುಂದಾಗಬೇಕು. ವಯಸ್ಕರರಿಗಿಂತ ಮಕ್ಕಳಿಗೆ ಹೆಚ್ಚಿನ ಕಾನೂನು ರಕ್ಷಣೆ ಇದೆ. ಮಕ್ಕಳು ಹೆದರುವ ಅವಶ್ಯಕತೆ ಇಲ್ಲ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ ಮಾತನಾಡಿ, ಬಾಲ್ಯ ವಿವಾಹದಿಂದಾಗುವ ದುಷ್ಠಪರಿಣಾಮಗಳ ಕುರಿತು ಮಕ್ಕಳು ಅರಿತುಕೊಂಡಲ್ಲಿ ತಾವು ಬಲಿ ಪಶುಗಳಾಗುವುದರಿಂದ ತಪ್ಪಿಸಿಕೊಳ್ಳಬಹುದು. ಆಡುವ ಕೂಸಿಗೆ ಕಾಡುವ ಕೂಸು ಹುಟ್ಟುವಂತಾಗಬಾರದು. ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂದು ಪಾಲಕರಿಗೂ ತಿಳಿವಳಿಕೆ ನೀಡಿ ಎಂದು ಹೇಳಿದರು.

ಶಾಲಾ ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಜಾಗೃತಿ ಮೂಡಿಸಬೇಕು. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಶ ಕರ್ಣಂ ಮಾತನಾಡಿ, ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡಗು. ಅದಕ್ಕೆ ಶಿಕ್ಷಣವೇ ಮದ್ದು ಆಗಿರುತ್ತದೆ. ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಬಾಲ್ಯ ವಿವಾಹದಂತಹ ಪ್ರಕರಣಗಳು ಕಡಿಮೆಯಾಗುತ್ತವೆ. ಸರ್ಕಾರ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಬಾಲ್ಯ ಎನ್ನುವುದು ಬೆಳವಣಿಗೆ ಹಂತ ಮತ್ತು ಮುಗ್ದತೆಯಿಂದ ಕೂಡಿರುವಂತಹದ್ದಾಗಿದೆ. ಬಾಲ್ಯದಲ್ಲಿಯೇ ವಿವಾಹವಾದರೆ ಮಕ್ಕಳ ಬೆಳವಣಿಗೆಯು ಕುಂಠಿತಗೊಂಡು ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಾಲ್ಯ ವಿವಾಹ ವಿರೋಧಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಗದ್ದಿ, ಕಾರ್ಯದರ್ಶಿ ಪಿ.ಎಚ್.ನಾರಾಯಣಕರ್ ಇದ್ದರು.

Leave a Reply

Your email address will not be published. Required fields are marked *