ರಾಯಚೂರ: ಪೇ,18-ಮಕ್ಕಳ ಸುಂದರ ಬಾಲ್ಯಕ್ಕೆ ಮಾರಣಾಂತಿಕವಾಗುವ ಬಾಲ್ಯದಲ್ಲಿ ಕಂಡುಬರುವ ಮಾರಕ ಕಾಯಿಲೆಗಳ ನಿಯಂತ್ರಣಕ್ಕೆ ವಯಸ್ಸಿಗನುಸಾರವಾಗಿ ಹಾಕುವ ಲಸಿಕೆಗಳನ್ನು, ಪಾಲಕರು ಹಬ್ಬ, ಹರಿದಿನಗಳು, ಜಾತ್ರೆಗಳು, ಮನೆಯಲ್ಲಿನ ಕೆಲಸಗಳ ಕಾರಣದಿಂದ ಮಗುವಿಗೆ ಹಾಕುವ ಲಸಿಕೆಗಳನ್ನು ಮುಂದುಡದೆ ವಯಸ್ಸಿಗನುಸಾರವಾಗಿ ಹಾಕಿಸಲು ಮರೆಯಬಾರದು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ತಾಯಂದಿರಿಗೆ ವಿನಂತಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ರಾಯಚೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್‌ಬಿಎಸ್‌ ನಗರ ಆಶ್ರಯದಲ್ಲಿ ಚಂದ್ರಬಂಡಾ ರಸ್ತೆಯ ಆಶ್ರಯ ಕಾಲೋನಿಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ 12 ಮಾರಕ ರೋಗಗಳ ವಿರುದ್ಧ ಹಾಗೂ ಗರ್ಭಿಣಿ ತಾಯಂದಿರಿಗೆ ಟಿಡಿ ಚುಚ್ಚುಮದ್ದು ಹಾಕುವ ಸಾರ್ವಜನಿಕ ಲಸಿಕಾ ಅಧಿವೇಶನದಲ್ಲಿ ಭಾಗವಹಿಸಿದ ತಾಯಂದಿರಿಗೆ ಜಾಗೃತಿ ನೀಡಿ ಮಾತನಾಡುತ್ತಾ ವೈಯಕ್ತಿಕ ಕಾರಣಗಳು ಏನೆ ಇರಲಿ ಮಗುವಿಗೆ ಬಾಲಕ್ಷಯ, ಪೋಲಿಯೋ, ಕಾಮಾಲೆ, ನಾಯಿಕೆಮ್ಮು, ಗಂಟಲುಮಾರಿ, ಧನುರ್ವಾಯು, ನ್ಯೂಮೋನಿಯಾ, ನ್ಯೂಮೊಕಾಕಲ್, ರೋಟಾವೈರಸ್‌ ಅತಿಸಾರ ಭೇದಿ, ದಡಾರ, ರೂಬೆಲ್ಲಾ, ಮೆದುಳುಜ್ವರ, ಇರುಳುಗಣ್ಣು, ತಡೆಗೆ ಲಸಿಕೆ ಹಾಕುವುದನ್ನು ಮುಂದುಡಬಾರದು. ಒಂದು ವೇಳೆ ಪರ‌ ಊರಿಗೆ ಹೊಗಿದ್ದರೂ ಸಹ ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ಉಚಿತವಾಗಿ ಮಕ್ಕಳಿಗೆ ಹಾಕಲಾಗುವುದು, ಈ ವೇಳೆ ತಾಯಿಕಾರ್ಡ್‌ ಮರೆಯಬಾರದು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ ಮಾಹಿತಿ ನೀಡುತ್ತಾ,
ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅವರ ನಿರಂತರ ನಿಗಾವಣೆ, ಒಂದು ವೇಳೆ ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡು ಬರುವ ವ್ಯತ್ಯಾಸವನ್ನು ನಗರ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್‌ಗಳಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಿಂದ ( ಐಎಫ್‌ಎ ಮಾತ್ರೆ, ಐರನ್‌ ಸುಕ್ರೋಸ್‌, ರಕ್ತ ಹಾಕಿಸುವಿಕೆ ) ಸುಧಾರಣೆ ಮಾಡಲು ಅವಕಾಶವಿದೆ. ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ ಕಡಿಮೆಯಾಗದಂತೆ ನಿರ್ವಹಿಸಲು ಇಲಾಖೆಯಿಂದ ಉಚಿತವಾಗಿ ಕೊಡಲ್ಪಡುವ ಕಬ್ಬಿಣಾಂಶ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಸೇವಿಸಲು ಹಾಗೂ ಹಸಿರು ತರಕಾರಿ, ಕಾಯಿಪಲ್ಯಗಳನ್ನು ದೈನಂದಿನವಾಗಿ ಸೇವಿಸಲು ಆಧ್ಯತೆ ನಿಡಲು ವಿನಂತಿಸಿದರು.
ಮೊದಲ ಹೆರಿಗೆ ನಂತರ ಎರಡನೇಯ ಮಗುವಿಗೆ ಕನಿಷ್ಟ 3 ವರ್ಷಗಳ ಅಂತರ ಕಾಪಾಡುವುದು ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದ್ದು, ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಮುಂತಾದವುಗಳನ್ನು ಬಳಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪವಿತ್ರಾ, ಆಶಾ ಕಾರ್ಯಕರ್ತೆ ಎಸ್ತಾರಮ್ಮ, ಅಂಗನವಾಡಿ ಕಾರ್ಯಕರ್ತೆ ಶಂಶಾದ್‌ ಬೇಗಂ, ಯುನಾಟೈಡ್‌ ವೆ ಸಂಸ್ಥೆಯ ಈರಮ್ಮ, ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *