ತಾಳಿಕೋಟಿ: ಮಹಾತ್ಮರ, ಸಂತ ಶರಣರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಂಡು ಧಾರ್ಮಿಕ ಮೌಲ್ಯಗಳ ಪರಿಪಾಲನೆಯನ್ನು ಮಾಡಿದರೆ ಜೀವನದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು. ತಾಲೂಕಿನ ನಾವದಗಿ ಗ್ರಾಮದ ಪರ್ವತೇಶ್ವರ ಬ್ರಹನ್ಮಠದ ಪೂಜ್ಯಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ತೊಟ್ಟಿಲೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಶುಕ್ರವಾರ ಸಂಜೆ ಆಶೀರ್ವಚನ ನೀಡಿದರು. ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಿಂದ ಕೂಡಿದೆ ಎಂಬುದು ಮುಖ್ಯ. ಸದಾ ಅನ್ಯರ ಕುರಿತು ಚಿಂತಿಸದೆ ನಮ್ಮ ಕುರಿತು ಚಿಂತಿಸುವ ಅಗತ್ಯವಿದೆ, ಆಧ್ಯಾತ್ಮಿಕ ಬದುಕಿನೊಂದಿಗೆ ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಸುಖ ಶಾಂತಿ ದೊರಕುತ್ತದೆ. ಪೂಜ್ಯ ರಾಜೇಂದ್ರ ಒಡೆಯರ್ ಶಿವಾಚಾರ್ಯರು ಈ ಭಾಗದ ಭಕ್ತರನ್ನು ಸಂಸ್ಕರಿಸಲು ಹಗಲಿರಳು ಶ್ರಮಿಸುತ್ತಿದ್ದಾರೆ ಅವರ ಧರ್ಮ ಜಾಗೃತಿಯ ಕಾರ್ಯ ಎಲ್ಲರಿಗೂ ಅನುಕರಣೀಯವಾಗಿದೆ. ಅವರ ಗುರು ಪಟ್ಟಾಧಿಕಾರದ ಐತಿಹಾಸಿಕ ಕಾರ್ಯಕ್ರಮವನ್ನು ಮಾಡಿ ಇಡೀ ನಾಡಿಗೇ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಮುಂದೆಯೂ ಅವರು ಮಾಡುವ ಎಲ್ಲ ಧರ್ಮ ಕಾರ್ಯಗಳಲ್ಲಿ ನಿಮ್ಮೆಲ್ಲರ ಸಹಕಾರ ಅವರೊಂದಿಗಿರಲಿ ಎಂದರು. ಪೂಜ್ಯ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚಬನೂರಿನ ರಾಮಲಿಂಗಯ್ಯ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಿಂಧನೂರಿನ ಡಾ.ಗುರುಮೂರ್ತಯ್ಯ ಹಿರೇಮಠ,ಸಾಹಿತಿ ಬಸವರಾಜ ಗೊರಜಿ, ಪುರಾಣಿಕ ರಾಚಯ್ಯ ಹಿರೇಮಠ,ಸಂಗೀತಗಾರ ಸೋಮಯ್ಯ ಸ್ವಾಮಿ,ತಬಲವಾದಕ ಮಹಾಂತೇಶ ಬಿರಾದಾರ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *