ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 02 ಹಾಗೂ 03ರಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಮಕ್ಕಳ ಹಬ್ಬ-2026ರ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರಚಾರ ಮತ್ತು ಪ್ರೋತ್ಸಾಹ ವ್ಯಕ್ತವಾಗಿದೆ.
‘ಎಡೆದೊರೆ ನಾಡು, ಚಿನ್ನದ ನಾಡು ರಾಯಚೂರು ಉತ್ಸವದ ನಿಮಿತ್ತ ಫೆಬ್ರವರಿ 2ನೇ ಹಾಗೂ 3ನೇ ದಿನಾಂಕದಂದು ಮಕ್ಕಳ ಹಬ್ಬ ಹಾಗೂ ಕೆರೆ ಹಬ್ಬ ಹಮ್ಮಿಕೊಂಡಿದ್ದು ಎಲ್ಲರೂ ಮಕ್ಕಳೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಬೇಕಾಗಿ ಕೋರುತ್ತಾ ಎಲ್ಲರಿಗೂ ರಾಯಚೂರು ಉತ್ಸವದ ಮಕ್ಕಳ ಹಬ್ಬ, ಕೆರೆ ಹಬ್ಬ ಹಾಗೂ ರಾಯಚೂರು ಉತ್ಸವದ ಅಂಗವಾಗಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ನಮ್ಮ ರಾಯಚೂರು ನಮ್ಮ ಹೆಮ್ಮೆ’ ಎಂದು ಬೇರೆ ಬೇರೆ ಶಾಲೆಗಳ ಮಕ್ಕಳು ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ತಿಳಿಸಿ, ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡುತ್ತಿರುವ ವಿಡಿಯೋಗಳು ವಾಟ್ಸಪ್, ಇನ್‌ಸ್ಟಾಗ್ರಾಂ ಮತ್ತು ಫೇಸಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಮೂಲಕ ಮಕ್ಕಳ ಹಬ್ಬಕ್ಕೆ ಭಾರಿ ಪ್ರಚಾರ ಮತ್ತು ಪ್ರೋತ್ಸಾಹ ವ್ಯಕ್ತವಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಈ ಮಕ್ಕಳ ಹಬ್ಬದಲ್ಲಿ ರೋಬೋಟಿಕ್ ಪ್ರಾಣಿಗಳ ಪ್ರದರ್ಶನ, ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ಬಳಗದದಿಂದ ವಿಸ್ಮಯ ಜಾದೂ, ಮಜಾ ಟಾಕೀಸ್ ಖ್ಯಾತಿಯ ಅಶೋಕ್ ಪೊಳಲಿಯವರಿಂದ ವಿಭಿನ್ನ ಶೈಲಿಯ ಬೃಹತ್ ಗಾತ್ರದ ಕೋಳಿ ನೃತ್ಯ ಮತ್ತು ಇನ್ನೀತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಕ್ಷಕರಿಂದ ಭಾರೀ ಪ್ರೋತ್ಸಾಹ: ಕೆಲವು ಶಾಲೆಗಳ ಶಿಕ್ಷಕರು ಬೇರೆ ಬೇರೆ ರೀತಿಯ ವಿಡಿಯೋ ಎಡಿಟಿಂಗ್ ಆ್ಯಪಗಳನ್ನು ಡೌನ್‌ಲೋಡ್ ಮಾಡಿ ಅದರಲ್ಲಿ ತಮ್ಮ ಶಾಲೆಯ ಮಕ್ಕಳ ವಿಡಿಯೋ ಮತ್ತು ಮಕ್ಕಳ ಹಬ್ಬದ ಪೋಸ್ಟರ್ ಅಳವಡಿಸಿ ಅದಕ್ಕೆ ಧ್ವನಿ ನೀಡಿ ಕೆಲವೇ ನಿಮಿಷಗಳ ಚಿಕ್ಕದಾದ ವಿಡಿಯೋಗಳನ್ನು ಅದ್ಭುತವಾಗಿ ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮತ್ತು ಸಾರ್ವಜನಿಕರಿಗೆ ಆತ್ಮೀಯವಾಗಿ ಆಹ್ವಾನ ನೀಡಿರುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂತಷ ವ್ಯಕ್ತಪಡಿಸಿದ್ದಾರೆ.
ಬೇರೆ ಬೇರೆ ಶಾಲೆಗಳು: ಮಲ್ಲಟದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾರ್ಥಿನಿಯರು, ರಾಯಚೂರಿನ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು, ನೇತಾಜಿ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು, ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸೇರಿದಂತೆ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಕಾರ್ಯಕ್ರಮದ ಮೆರುಗು ಹೆಚ್ಚಿಸಿವೆ.

Leave a Reply

Your email address will not be published. Required fields are marked *