ದೇವನಾಂಪ್ರಿಯ ಸಾಮ್ರಾಟ ಅಶೋಕನ ನಾಡಿನ ಭವ್ಯ ಭಾರತದ ಇತಿಹಾಸ ಪರಂಪರೆಯಲ್ಲಿ ಧಾರ್ಮಿಕವಾಗಿ ಮಸ್ಕಿಯು ಬಹಳ ವಿಶೇಷತೆಯನ್ನು ಪಡೆದಿದೆ. ಎರಡನೇ ಶ್ರೀಶೈಲವೆಂದೆ ಪ್ರಸಿದ್ಧಿ ಪಡೆದಿರುವ ಶ್ರೀ ಬ್ರಮರಾಂಬ ಮಲ್ಲಿಕಾರ್ಜುನ ದೇವಾಲಯವು ಐತಿಹಾಸಿಕವಾಗಿ ಧಾರ್ಮಿಕವಾಗಿ ಸಮಾನತೆಯನ್ನು ನೀಡಿದೆ. ಹೇಗೆಂದರೆ ಶ್ರೀ ಮಲ್ಲಿಕಾರ್ಜುನ ರಥೋತ್ಸವವನ್ನು ಪುರುಷರು ಎಳೆದರೆ ಶ್ರೀ ಭ್ರಮರಾಂಬ ದೇವಿಯ ರಥೋತ್ಸವವನ್ನು ಮಹಿಳೆಯರು ಎಳೆಯುತ್ತಾರೆ.
ಮಸ್ಕಿ ಸಮೀಪದ ಬೆಲ್ಲದ ಮರಡಿ ಗ್ರಾಮದ ದೇಸಾಯಿ ಮನೆತನದ ಭಕ್ತಿಗೆ ಸದಾ ಶ್ರೀಶೈಲ ಮಲ್ಲಿಕಾರ್ಜುನ ಆರಾಧ್ಯ ದೈವ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ಹೋಗಿ ಮಲ್ಲಿಕಾರ್ಜುನ ದರ್ಶನ ಪಡೆದು ಪುನೀತರಾಗಿ ರಾತ್ರಿ ಕನಸಿನಲ್ಲಿ ಸದಾ ಮಲ್ಲಿಕಾರ್ಜುನ ದರ್ಶನ ನೀಡಿ ನಿನ್ನ ಕೋರಿಕೆಯನ್ನು ಷರತ್ತಿನೊಂದಿಗೆ ಈಡೇರಿಸುವುದಾಗಿ ಹೇಳಿ ಆ ಸಾದ್ವಿಯ ಜೊತೆಗೆ ಬೆಲ್ಲದಮರಡಿ ಗ್ರಾಮಕ್ಕೆ ಬರುವಾಗ ಮಸ್ಕಿ ಹತ್ತಿರ ಬಂದಾಗ ಮಲ್ಲಿಕಾರ್ಜುನ ತನ್ನ ಹಿಂದೆ ಬರುತ್ತಿದ್ದಾನವೋ ಇಲ್ಲವೋ ಎಂಬ ಸಂದೇಹದೊಂದಿಗೆ ಹಿಂತಿರುಗಿ ನೋಡಿದಾಗ ಷರತ್ತಿನಂತೆ ಮಲ್ಲಿಕಾರ್ಜುನ ಮಸ್ಕಿ ಬೆಟ್ಟದಲ್ಲಿ ಪಾದವಿಟ್ಟು ದೊಡ್ಡ ಬೆಟ್ಟದಲ್ಲಿ ನೆಲೆಸುತ್ತಾನೆ. ಚಿಕ್ಕ ಬೆಟ್ಟದಲ್ಲಿರುವುದು ಮುದ್ದು ಮಲ್ಲಿಕಾರ್ಜುನ ದೊಡ್ಡ ಬೆಟ್ಟದಲ್ಲಿರುವುದು ಶ್ರೀಮಲ್ಲಿಕಾರ್ಜುನ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಮಸ್ಕಿಯ ಜನತೆ ದೊಡ್ಡ ಬೆಟ್ಟ ಹತ್ತಿ ದರ್ಶನ ಪಡೆಯುವುದು ಕಷ್ಟವಾಗಿರುವ ಕಾರಣದಿಂದ 30 ವರ್ಷಗಳ ಹಿಂದೆ ಗ್ರಾಮದ ಹೃದಯ ಭಾಗದಲ್ಲಿರುವ ತೇರು ಬಜಾರ್ ನಲ್ಲಿ ಶ್ರೀ ಮಲ್ಲಿಕಾರ್ಜುನನಿಗಾಗಿ ದೇವಸ್ಥಾನವನ್ನು ನಿರ್ಮಿಸಿ ಮಲ್ಲಿಕಾರ್ಜುನ ಮೂರ್ತಿ ಹಾಗೂ ನಂದಿಯನ್ನು ಸ್ಥಾಪಿಸಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ 01/02/2026 ರವಿವಾರದಂದು ಮಾಘ ಶುದ್ಧ 15ನೇ ದಿನದ ಭಾರತ ಹುಣ್ಣಿಮೆಯ ದಿನ ಜಾತ್ರಾ ಮಹೋತ್ಸವ ಸಾಯಂಕಾಲ ಮಹಾ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ.
ಮಕ್ಕಳ ಮಲ್ಲಯ್ಯ: ತೇರಿನ ಮನೆಯಿಂದ ರಥವನ್ನು ತರುವುದು ಹಾಗೂ ಜಾತ್ರೆಯ ನಂತರ ತೇರಿನ ಮನೆಯೊಳಗೆ ರಥವನ್ನು ನಿಲ್ಲಿಸುವುದು ಮಕ್ಕಳ ಪಾಲಿಗೆ ಬಿಡಲಾಗಿದೆ ಇದು ದೊಡ್ಡವರಿಂದ ಈ ಕಾರ್ಯ ಸಾಧ್ಯವಾಗುವುದಿಲ್ಲ. ಏಕೆಂದರೆ ಮಲ್ಲಯ್ಯ ಮಕ್ಕಳ ಮಲ್ಲಯ್ಯನಾಗಿದ್ದಾನೆಂಬ ನಂಬಿಕೆ. ಹೀಗಾಗಿ ಮಸ್ಕಿಯ ನಾಗರಿಕರು ಮಕ್ಕಳಿಗೆ ನೀಡಿದ ಸಮಾನ ಅವಕಾಶವೆಂದು ಹೇಳಬಹುದು. ಇಲ್ಲಿನ ಮತ್ತೊಂದು ವಿಶೇಷತೆ ಪುರುಷರಿಗೆ ,ಮಹಿಳೆಯರಿಗೆ, ಮಕ್ಕಳಿಗೆ ಧಾರ್ಮಿಕ ಸಮಾನತೆ ನೀಡಿದ ಮಾಸಂಗಿಪುರದ ಭಕ್ತರ ಭಕ್ತಿಗೆ ನೀಡಿದ ಪ್ರತೀಕವಾಗಿದೆ.
ಸಂಗ್ರಹ ಬರಹ: ಮಲ್ಲಿಕಾರ್ಜುನ.ಸಿ. ಉದ್ಬಾಳ(ಯು)
8884981106

Leave a Reply

Your email address will not be published. Required fields are marked *