ತಾಳಿಕೋಟಿ: ಶಿಕ್ಷಣದ ದಾಸೋಹದ ಮೂಲಕ ನಾಡಿನ ಮಠ ಮಾನ್ಯರು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ತಂದರೆ ಸಹಕಾರಿ ಸಂಘ ಸಂಸ್ಥೆಗಳು ರೈತರಿಗೆ ಆರ್ಥಿಕ ಶಕ್ತಿಯನ್ನು ನೀಡಿ ಅವರ ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ ಎಂದು ಸಕ್ಕರೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಸೋಮವಾರ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ಇದರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸಕಾಲಕ್ಕೆ ಸಿಗುವುದು ಕಷ್ಟ ಆದರೆ ಸಹಕಾರಿ ಸಂಘಗಳಿಂದ ಅದು ಸರಳವಾಗಿ ಬೇಗನೆ ಸಿಗುತ್ತದೆ ಆದರೆ ಪಡೆದ ಸಾಲ ಸಕಾಲಕ್ಕೆ ಮರುಳಿಸಿ ಸಂಘದ ಪ್ರಗತಿಗೆ ಸಹಕರಿಸಬೇಕು. ಇವತ್ತು ರಾಜ್ಯದ ಸಹಕಾರಿ ಸಂಘಗಳಿಂದ 35 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗಿದೆ ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದ ಅವರು ಈ ಬ್ಯಾಂಕಿನ ಆರಂಭಕ್ಕೆ ಸಾಕಷ್ಟು ಶ್ರಮಿಸಿದ ಇದರ ಸಂಸ್ಥಾಪಕ ಅಧ್ಯಕ್ಷ ದಿವಂಗತ ಕಶಟ್ಟಿ ಅವರನ್ನು ಸ್ಮರಿಸುವುದು ಅಗತ್ಯವಾಗಿದೆ ಮನುಷ್ಯ ಜಗತ್ತನ್ನು ಬಿಟ್ಟು ಹೋಗುವಾಗ ತನ್ನ ಒಂದು ನೆನಪು ಬಿಟ್ಟು ಹೋಗಬೇಕು ಅದನ್ನು ಸದಾ ಜನರು ಸ್ಮರಿಸುವಂತಾಗಬೇಕು. ಈ ಬ್ಯಾಂಕು ಕಡಿಮೆ ಅವಧಿಯಲ್ಲಿ ಇದಕ್ಕೆ ಇಲ್ಲಿರುವ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಸದಸ್ಯರ ಸಹಕಾರವೇ ಕಾರಣ ಎಂದರು. ಕೆ.ಎಸ್.ಡಿ.ಎಲ್. ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಅವರು ಮಾತನಾಡಿ ಸಂಘದ ಕಟ್ಟಡ ಆರಂಭಿಸಲು ಹಲವಾರು ತೊಡಕುಗಳು ಇದ್ದವು ಇವುಗಳನ್ನು ನಿವಾರಿಸಲು ಅಂದಿನ ಸಹಕಾರಿ ಸಚಿವ ಎಚ್.ಟಿ. ಸೋಮಶೇಖರ ಹಾಗೂ ಸಚಿವ ಶಿವಾನಂದ್ ಪಾಟೀಲರು ಸಾಕಷ್ಟು ಸಹಕರಿಸಿದ್ದಾರೆ ಅವರಿಗೆ ನಾನು ಸಂಘದ ಪರವಾಗಿ ಅಭಿನಂದಿಸುತ್ತೇನೆ, ಹಣ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಅದರ ಸರಿಯಾದ ವಿನಿಯೋಗ ಅಗತ್ಯವಾಗಿದೆ ಸಹಕಾರಿ ಸಂಘಗಳು ಉಳಿದು ಬೆಳೆಯಲು ಎಲ್ಲರ ಸಹಕಾರದ ಅಗತ್ಯವಿದೆ ಈ ಬ್ಯಾಂಕು ಇದರ ಸಂಸ್ಥಾಪಕ ಅಧ್ಯಕ್ಷ ಕಶೆಟ್ಟಿ ಅವರ ಕನಸಿನ ಕೂಸಾಗಿದೆ ಎಂದರು. ಶಾಸಕ ರಾಜುಗೌಡ ಪಾಟೀಲ ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ಸಚಿವ ಶಿವಾನಂದ ಪಾಟೀಲರ ಕೊಡುಗೆ ಅಪಾರವಾಗಿದೆ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಅಗತ್ಯವಿಲ್ಲ, ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಈ ಬ್ಯಾಂಕು ಕಡಿಮೆ ಅವಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಇದಕ್ಕೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸುತ್ತೇನೆ ಎಂದರು. ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ಎಸ್ ಪಾಟೀಲ ಯಾಳಗಿ ಹಾಗೂ ಜಿ. ನಂಜನಗೂಡ ಸಿಎ, ಮಾತನಾಡಿದರು. ಸಂಘದ ಅಧ್ಯಕ್ಷ ಕಾಶಿನಾಥ ಎಸ್ ಮುರಾಳ ಅಧ್ಯಕ್ಷತೆ ವಹಿಸಿದ್ದರು. ಇಂಗಳೇಶ್ವರದ ಮ.ನಿ.ಪ್ರ. ಜಗದ್ಗುರು ಡಾ.ಸಿದ್ದಲಿಂಗ ಮಹಾಸ್ವಾಮೀಜಿ, ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ನಿಬಂಧಕ ಚೇತನ್ ಭಾವಿಕಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಗುರು ತಾರನಾಳ, ಮಲ್ಲಣ್ಣ ಯಾತಗಿರಿ, ವಿವಿ ಸಂಘದ ಅಧ್ಯಕ್ಷ ವಿ ಸಿ ಹಿರೇಮಠ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ ಸಿ ಸಜ್ಜನ್, ನಿರ್ದೇಶಕ ಎಂ.ಎಸ್.ಸರಶಟ್ಟಿ, ಎಪಿಎಂಸಿ ಕಾರ್ಯದರ್ಶಿ ಆರ್ ಎಸ್ ರಾಥೋಡ ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಶಿವಲೀಲಾ ಮುರಾಳ ಪ್ರಾರ್ಥಿಸಿದರು. ಸಂಗಮೇಶ ದೇಸಾಯಿ ಸ್ವಾಗತಿಸಿದರು. ಕುಮಾರಿ ತೇಜಸ್ವಿನಿ ಡಿಸಲೆ, ಶ್ರೀಕಾಂತ ಪತ್ತಾರ ಡಾ.ಅನಿಲಕುಮಾರ ಇರಾಜ,ಮಹಾಂತೇಶ ಮುರಾಳ ನಿರೂಪಿಸಿದರು. ಕಾಶಿನಾಥ ಮುರಾಳ ವಂದಿಸಿದರು.

Leave a Reply

Your email address will not be published. Required fields are marked *