ಒಳ ಮೀಸಲಾತಿ ರಹಿತ ಹಳೆಯ ಮೀಸಲಾತಿ ಪದ್ದತಿಯನ್ನು ಮರು ಜಾರಿಗೆ ತಂದು ನೇಮಕಾತಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ಹೊರಡಿಸಬೇಕು, ಒಳ ಮೀಸಲಾತಿ ಜಾರಿಗೆ ತಂದ ನಂತರ ಅನೇಕ ಆಡಳಿತಾತ್ಮಕ ಕಾನೂನು ಮತ್ತು ಸಾಮಾಜಿಕ ಗೊಂದಲಗಳು ಉಂಟಾಗಿವೆ ಎಂದು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ರಾಮಣ್ಣ ಗೋನವಾರ ಆರೋಪ ಮಾಡಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಛಲವಾದಿ ಮಹಾಸಭಾದಿಂದ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೆ ಮಾಡಿ ಕೆಳಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ನಾಗಮೋಹನ್ ದಾಸರ ವರದಿ ಕೆಳ ಸಮುದಾಯಕ್ಕೆ ಮರಣಶಾಸನವಾಗಿದೆ. ಕೆಪಿಎಸ್.ಸಿ ಗೆಜೆಟೆಡ್ ಪ್ರೋಬೇಷನರಿ ನೇಮಕಾತಿ ಶೇ.17 ರಷ್ಟು ಮೀಸಲಾತಿ ಕುರಿತು ತೀರ್ಪು ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆ ನೇಮಕಾತಿ ಪ್ರಕ್ರಿಯೆಗೆ ವಿಳಂಬವಾಗಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಲಗೈಗೆ ಸಂಬಂಧಿಸಿದ ಜಾತಿಗಳಲ್ಲಿ 63 ಒಳಜಾತಿಗಳು ಬರುತ್ತಿದ್ದು, ಒಳಮೀಸಲಾತಿ ಜಾರಿಯಿಂದ ಶೋಷಿತ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಆಡಳಿತಾತ್ಮಕವಾಗಿ ತೊಂದರೆ ಉಂಟಾಗುತ್ತಿದೆ. ಒಳಮೀಸಲಾತಿ ಕುರಿತು ಉಂಟಾದ ಗೊಂದಲದ ಸಮಸ್ಯೆಗಳು, ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆ ಆಗುವವರೆಗೆ ಒಳಮೀಸಲಾತಿ ರಹಿತ ಹಳೆಯ ಮೀಸಲಾತಿ ಪದ್ಧತಿಯನ್ನು ಮರುಜಾರಿಗೆ ತಂದು ನೇಮಕಾತಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾದ ಹನುಮಂತಪ್ಪ ಗೋಮರ್ಸಿ, ನರಸಪ್ಪ ಕಟ್ಟಿಮನಿ, ವೀರೇಶ ಹಂಚಿನಾಳ, ದುರುಗಪ್ಪ ಮಲ್ಲಾಪುರ, ಹನುಮಂತಪ್ಪ ವಕೀಲ ಬೂದಿವಾಳ, ಅಯ್ಯಪ್ಪ ವಕೀಲ ಮಲ್ಲಾಪುರ, ವಿರುಪಣ್ಣ ಬೂದಿವಾಳ, ರಾಜು ಉದ್ದಾಳ, ದೊಡ್ಡಬಸವ, ನಿರುಪಾದಿ ಸಾಸಲಮರಿ, ಶಿವುಪುತ್ರ ಪಗಡದಿನ್ನಿ, ಶ್ಯಾಮಣ್ಣ, ಸಿದ್ದಪ್ಪ, ಬಾಲರಾಜ ವಿರುಪಾಪುರ, ಮುದುಕಪ್ಪ, ಶರಣಪ್ಪ ಸೋಮನಾಳ, ಹುಸೇನಪ್ಪ, ವೀರೇಶ ಹೊಸಳ್ಳಿ, ಸೇರಿದಂತೆ ನೂರಾರು ಜನರು ಇದ್ದರು.

Leave a Reply

Your email address will not be published. Required fields are marked *