ಮುದ್ದೇಬಿಹಾಳ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಆವರಣವನ್ನು ಕಾಂಕ್ರೀಟ್ ಮಾಡುವ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಸುಮಾರು 4 ಕೋಟಿ 90 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಸಾಬೂನು ಹಾಗೂ ಮಾರ್ಜಕ ನಿಗಮದ ನಿ. ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಶನಿವಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣವು ಸಾವಿರಾರು ಪ್ರಯಾಣಿಕರ ನಿತ್ಯ ಸಂಚಾರದ ಪ್ರಮುಖ ಕೇಂದ್ರವಾಗಿದ್ದು, ಮಳೆಗಾಲ ಹಾಗೂ ಬೇಸಿಗೆಯಲ್ಲಿ ಸಾರ್ವಜನಿಕರು ಎದುರಿಸುವ ತೊಂದರೆಗಳನ್ನು ಮನಗಂಡು ಕಾಂಕ್ರೀಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಹಡಲಗೇರಿ ರಸ್ತೆಯಲ್ಲಿ ಡಿಪೂ ನಿರ್ಮಾಣಕ್ಕಾಗಿ ಸುಮಾರು 3 ಎಕರೆ ಸ್ಥಳವನ್ನು ಪರಿಶೀಲಿಸಲಾಗಿದ್ದು, ಈ ಕುರಿತು ಇನ್ನೂ ಅಂತಿಮ ಹಂತದ ನಿರ್ಧಾರ ಕೈಗೊಳ್ಳಬೇಕಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಪೂ ಮ್ಯಾನೇಜರ್ ಅಶೋಕಕುಮಾರ ಬೋವಿ, ಗೋಪಾಲ ಮಡಿವಾಳರ, ಜೆ.ಡಿ. ಮುಲ್ಲಾ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *