ಕೊಪ್ಪಳ : ‘ಅನ್ನ, ಅಕ್ಷರ ದಾಸೋಹಕ್ಕೆ ಮಾತ್ರ ಸೀಮಿತವಾಗದೆ ಈ ಭಾಗದ ಜಲ, ನೆಲ, ಪ್ರಾಕೃತಿಕ ರಕ್ಷಣೆಗೆ ಗವಿಸಿದ್ದೇಶ್ವರ ಮಠವು ನಿರಂತವಾಗಿ ಶ್ರಮಿಸುತ್ತಿದೆ. ಗವಿಮಠ ಈ ಭಾಗದ ಜನರ ಭರವಸೆ, ನಂಬಿಕೆ ಪ್ರತೀಕವಾಗಿದೆ. ಕೇವಲ ಧಾರ್ಮಿಕ ಸಂಸ್ಥೆಯಾಗದೆ ಮೌಲ್ಯಗಳ ದೀಪಸ್ತಂಭ, ಕರುಣೆಯ ಆಶ್ರಯ ತಾಣ, ಮಾನವೀಯತೆ ಪಾಠ ಶಾಲೆಯಾಗಿ ಕೆಲಸ ಮಾಡುತ್ತಿದೆ’ ಎಂದು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್‌.ವಿಜಯಶಂಕರ್‌ ಬಣ್ಣಿಸಿದರು.

ಜಾತ್ರೆಯ ಅಂಗವಾಗಿ ಕೈಲಾಸ ಮಂಟಪದಲ್ಲಿ ಸೋಮವಾರ ನಡೆದ ಧಾರ್ಮಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಕ್ಷರ ದಾಸೋಹ, ಜ್ಞಾನ ದಾಸೋಹ, ಅನ್ನ ದಾಸೋಹ ಮನುಕುಲವನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುತ್ತದೆ. ಸ್ವಾಮೀಜಿ ಸಾಧನೆ ಅವಲೋಕಿಸಿದರೆ ಅವರಲ್ಲಿ ಅಪಾರ ಮಹಿಮೆ ಕಾಣುತ್ತೇವೆ.‌ ಗವಿಸಿದ್ದೇಶ್ವರ ಸ್ವಾಮೀಜಿ ಸಮಾಜಮುಖಿ ಕಾರ್ಯಕ್ಕೆ ಉದಾಹರಣೆಯಾಗಿದ್ದಾರೆ. ಬದುಕುವ‌ ಸಂದೇಶವನ್ನು ಮನುಕುಲಕ್ಕೆ ತಿಳಿಸುತ್ತಿದ್ದಾರೆ. ಮನುಕುಲ ಬೆಳಗುತ್ತಿರುವ ಕರ್ಮಯೋಗಿಯಾಗಿದ್ದಾರೆ’ ಎಂದರು.

ಪರಿಸರದ ಉಳಿವಿಗಾಗಿ ಕೆಲಸ ಮಾಡುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜಸ್ಥಾನದ ಶ್ಯಾಮಸುಂದರ್ ಪಾಲಿವಾಲ್‌ ಮಾತನಾಡಿ ‘ಜಾತ್ರೆಯಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯವಾಗಿದೆ. ಪರಿಸರದ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಆದ್ಯತೆಯಾಗಬೇಕು. ಗ್ರಾಮದಲ್ಲಿ ಉತ್ತಮ ಪರಿಸದ ನಿರ್ಮಾಣ ಮಾಡಿದರೆ ನೆಲ, ಜಲ ರಕ್ಷಿಸಬಹುದು. ಜನ್ಮದಿನದಂದು ಗಿಡ ನೆಡುವ ಮೂಲದ ಮಾದರಿಯಾಗಬೇಕು. ಪಂಚಾಯಿತಿಗಳ ಹಣದಿಂದ ವಿಭಿನ್ನ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಮಾಡಬೇಕು’ ಎಂದು ಹೇಳಿದರು.

ಹುಬ್ಬಳ್ಳಿಯ ಮೂರುಸಾವಿರ ಮಹಾಸಂಸ್ಥಾನ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಖಂಡಕಿ ಗುರುದೇವಾಶ್ರಮದ ಯೋಗಿಶ್ವರ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶಿವಮೊಗ್ಗದ ಹಿಂದೂಸ್ತಾನಿ ಗಾಯಕ ವಿದ್ವಾನ್ ನೌಶಾದ್, ನಿಶಾದ್ ಹರ್ಲಾಪುರ್ ಅವರಿಂದ ಸ್ವರಸಂಧ್ಯಾ ಜಗಲ್‌ಬಂದಿ ಮತ್ತು ಗಂಗಾವತಿಯ ನರಸಿಂಹ ಜೋಶಿ ಇವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *