ಬಹದ್ದೂರುಬಂಡಿ : ಡಿಸೆಂಬರ್ 27: ರಾಜ್ಯದ ಸರ್ಕಾರಿ ಶಾಲೆಯೊಂದರ ಮಕ್ಕಳಿಗೆ ಮುಖ್ಯೋಪಾಧ್ಯಾಯರು ಸ್ವಂತ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ವಿಮಾನಯಾನದ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಪಠ್ಯೇತರ ಕನಸುಗಳನ್ನು ನನಸಾಗಿಸಿದ್ದಾರೆ. ಮೊದಲ ಬಾರಿಗೆ ವಿಮಾನ ಏರಿದ ಖುಷಿ ಮಕ್ಕಳ ಮೊಗದಲ್ಲಿ ರಾರಾಜಿಸಿತು.
ಕೊಪ್ಪಳ ಜಿಲ್ಲೆಯ ಬಹದ್ದೂರುಬಂಡಿ ಗ್ರಾಮದ ಈ ಸರ್ಕಾರಿ ಶಾಲಾ ಶಿಕ್ಷಕರ ಈ ಕಾರ್ಯಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ.
ಕೊಪ್ಪಳ ಜಿಲ್ಲೆಯ ಬಹದ್ದುರಬಂಡಿ ಗ್ರಾಮದ ಸರ್ಕಾರಿ ಶಾಲೆಯ 24 ಮಕ್ಕಳು ಆಗಸದಲ್ಲಿ ಹಾರಾಡಿ ನಲಿದರು. ವಿಮಾನಯಾನದ ಅದ್ಭುತ ಕ್ಷಣ ಅನುಭವಿಸಿ ಸಂತಸಪಟ್ಟರು. ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಡಿಸೆಂಬರ್ 26 ಶುಕ್ರವಾರ ಈ ವಿಮಾನಯನ ಪ್ರಯಾಣ ಆಯೋಜಿಸಿದ್ದರು. ಮಕ್ಕಳ ಭಷಿಷ್ಯದ ಏಳಿಗೆಗೆ ಜೊತೆಗೆ ಅವರ ವಿಮಾನ ಹಾರಾಟದ ಕನಸಿಗೂ ನೀರೆರೆದಿದ್ದಕ್ಕೆ ಪೋಷಕರು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನೆಟ್ಟಿಗರು ಅಂಡಗಿ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಮುಖ್ಯೋಪಾಧ್ಯಾಯರು ಇದಕ್ಕೆಂದೆ ವಿವಿಧ ಮೂಲಗಳಿಂದ ಸುಮಾರು 5 ಲಕ್ಷ ರೂ.ಗಳನ್ನು ಹೊಂದಿಸಿದರು. ಆ ಹಣದಲ್ಲಿ ವಿದ್ಯಾರ್ಥಿಗಳ ವಿಮಾನಯಾನ ಪ್ರವಾಸ ಆಯೋಜಿಸಿದರು. ಈ ವಿಮಾನವು ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಿಂದ ಮಕ್ಕಳನ್ನು ಬೆಂಗಳೂರಿಗೆ ಕರೆತಂದರು. ವಿಮಾನ ಹೊರಡುವ ಮುನ್ನ ಸಂಸದ ರಾಜಶೇಖರ್ ಹಿಟ್ನಾಳ್ ಅವರು ವಾಯು ಪ್ರಯಾಣಕ್ಕೆ ಚಾಲನೆ ಕೊಟ್ಟರು. ಅಲ್ಲದೇ ಮುಖ್ಯೋಪಾಧ್ಯಾಯರು ಗ್ರಾಮೀಣ ಶಿಕ್ಷಣಕ್ಕೆ ನೀಡುವ ಆದ್ಯತೆ, ಸಮರ್ಪಣೆ ಭಾವವನ್ನು ಶ್ಲಾಘಿಸಿದರು.
ಮಕ್ಕಳನ್ನು ಬಿಳ್ಕೊಟ್ಟ ಪೋಷಕರು ಭಾವುಕ
ವಿಮಾನ ಏರುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಹಿಡಿದು ತಮ್ಮ ಆಸನಗಳಲ್ಲಿ ಕೂತ ಫೋಟೋಗಳನ್ನು ಬಳ್ಳಾರಿ ಟ್ವಿಟ್ಜ್ (@TweetzBallari) ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳ ಜೊತೆಗೆ ಮಕ್ಕಳನ್ನು ಬಿಳ್ಕೊಡಲು ಏರ್‌ಪೋರ್ಟ್‌ಗೆ ಬಂದಿದ್ದ ಪೋಷಕರು, ಗ್ರಾಮಸ್ಥರಲು ಭಾವುಕರಾಗಿದ್ದು ಕಂಡು ಬಂತು. ಪೋಷಕರು ವಿಮಾನಯಾನ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಕ್ಕಳ ಆಸೆ ನೆರವೇರಿಸಿದ ಅಂಡಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮಕ್ಕಳು ಸೇರಿ 40 ಮಂದಿ ಪ್ರಯಾಣ
ಈ ವಿದ್ಯಾರ್ಥಿಗಳಲ್ಲಿ 5 ರಿಂದ 8 ನೇ ತರಗತಿಯವರೆಗೆ ತಲಾ ನಾಲ್ವರು ವಿದ್ಯಾರ್ಥಿಗಳು ಇದ್ದರು. ದೈಹಿಕ ಶಿಕ್ಷಕರು ನಡೆಸಿದ ವಿಶೇಷ ಪರೀಕ್ಷೆಯ ಅರ್ಹತೆ ಪಡೆದವರನ್ನು ವಿಮಾನಯಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ವಿದ್ಯಾರ್ಥಿಗಳ ಜೊತೆಗೆ, ಶಿಕ್ಷಕರು, ಮಧ್ಯಾಹ್ನದ ಊಟದ ಅಡುಗೆಯವರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಸಹ ಪ್ರವಾಸದ ಭಾಗವಾದರು. ಮಕ್ಕಳು ಸೇರಿ ಒಟ್ಟು 40 ಪ್ರಯಾಣಿಕರನ್ನು ಹೊತ್ತ ವಿಮಾನ ಬಳ್ಳಾರಿಯಿಂದ ಬೆಂಗಳೂರಿಗೆ ಹಾರಿತು.


