ಕೊಪ್ಪಳ : ಡಿ 28 ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಗಂಡು ಶಿಶುವನ್ನು ಜೀವ ರಕ್ಷಣೆಗಾಗಿ ಕೊಪ್ಪಳ ಕಿಮ್ಸ್ ನಿಂದ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ ಘಟನೆ ಡಿ.28ರ ರವಿವಾರ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗುತ್ತೂರು ಗ್ರಾಮದ ಮಲ್ಲಪ್ಪ-ವಿಜಯಲಕ್ಷ್ಮೀ ದಂಪತಿಗೆ ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು.
ಹೆರಿಗೆ ವೇಳೆ ಶಿಶುವಿನ ಕರುಳುಗಳು ಹೊರಗಡೆ ಬಂದ ಹಿನ್ನೆಲೆ ತಕ್ಷಣವೇ ಹೆಚ್ಚಿನ ಚಿಕಿತ್ಸೆಯ ಅಗತ್ಯವಾಯಿತು.
ಈ ಹಿನ್ನೆಲೆ ಕೊಪ್ಪಳದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ನಿರ್ಧಾರ ಕೈಗೊಳ್ಳಲಾಯಿತು.
ಯಾವುದೇ ವಿಳಂಬವಾಗದಂತೆ 5 ಆಂಬ್ಯುಲೆನ್ಸ್ ಗಳ ಸಹಾಯದಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು. ಆಂಬ್ಯುಲೆನ್ಸ್ ಸಿಬ್ಬಂದಿ ನಿರಂತರ ವೈದ್ಯಕೀಯ ನಿಗಾ ವಹಿಸಿಕೊಂಡು ಶಿಶುವನ್ನು ಹುಬ್ಬಳ್ಳಿಗೆ ರವಾನೆ ಮಾಡುತ್ತಿದ್ದಾರೆ.
ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಸುಗಮ ಸಂಚಾರ ಒದಗಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದು, ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ನಿಯಂತ್ರಿಸಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು. ಶಿಶುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಜೀವ ಉಳಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.

