ಚಿತ್ರದುರ್ಗ : ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 09 ಜನರ ಜೀವ ಬಲಿ ಪಡೆದ ಭೀಕರ ಬಸ್ ಅಪಘಾತ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಅವರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಖಾಸಗಿ ಬಸ್‌ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆ ವೇಳೆ ಲಾರಿಯಿಂದ ಗುದ್ದಿಸಿಕೊಂಡ ಖಾಸಗಿ ಬಸ್ ಹೊತ್ತಿ ಉರಿಯುವ ಮುನ್ನ ಅದೇ ದಾರಿಯಲ್ಲಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳಿದ್ದ ಬಸ್‌ ಗೂ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಮಕ್ಕಳಿಗೆ ಏನು ಆಗಿಲ್ಲ. ಶಾಲಾ ಮಕ್ಕಳ ಬಸ್ ಚಾಲಕನೇ ಘಟನೆಯ ಪ್ರತ್ಯಕ್ಷದರ್ಶಿ ಎಂದು ಅವರು ತಿಳಿಸಿದರು.

ಇಂದು (ಡಿ.24) ಬೆಳಗಿನ ಜಾವ ಸುಮಾರು 2 ಗಂಟೆಗೆ ಹೊತ್ತಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಡುತ್ತಿದ್ದ ಸಿಬರ್ಡ್ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹೈವೇಯಲ್ಲಿ ಎದುರಗಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿಯು ಡಿವೈಡರ್ ಹತ್ತಿ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಂಟೇನರ್ ರಭಸವಾಗಿ ಬಸ್ ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತತ್‌ಕ್ಷಣಕ್ಕೆ ಬಸ್‌ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಬಸ್ ತುಂಬಾ ಆವರಿಸಿದ ಪರಿಣಾಮ 08 ಮಂದಿ ಪ್ರಯಾಣಿಕರು ಸುಟ್ಟು ಹೋಗಿದ್ದು, ಹೊರ ಬರಲಾಗದೇ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

ಕಂಟೇನರ್ ಚಾಲಕ ಸೇರಿ 09 ಸಾವು

ಬೆಂಕಿ ಕಾಣಿಸುತ್ತಿದ್ದಂತೆ ಬಸ್‌ನಲ್ಲಿದ್ದ ಕೆಲವರು ಪಾರಾಗಿದ್ದಾರೆ. ಎಂಟು ಜನ ಬಸ್ ಒಳಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾರೆ. ತೀವ್ರ ಬೆಂಕಿ ಆವರಿಸಿದ್ದರಿಂದ ಬಸ್‌ಗೆ ಗುದ್ದಿದ ಕಂಟೆನರ್ ಚಾಲಕ ಸಹ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾನೆ. ಒಬ್ಬ ಚಾಲಕ, ಎಂಟು ಮಂದಿ ಬಸ್‌ ಪ್ರಯಾಣಿಕರು ಸೇರಿ ಈವರೆಗೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ಉಳಿದಂತೆ ಗಾಯಾಳುಗಳ ಪೈಕಿ 12 ಹಿರಿಯೂರಿಗೆ, ಒಂಬತ್ತು ಜನ ಶಿರಾ ಹಾಗೂ ಮೂರು ಜನ ಗಾಯಾಳುಗಳನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ತಗುಲಿದ ಮೂವರು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಬೆಂಕಿ ತಗುಲಿ ಗಾಯಗೊಂಡವರನ್ನು ಹೊರತುಪಡಿಸಿದರೆ ಅದೃಷ್ಟವಶಾತ್ ಉಳಿದವರ ಜೀವಕ್ಕೆ ಅಪಾಯ ಇಲ್ಲ. ಒಟ್ಟು 32 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ ಎಂಟು ಜನ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ ಎಂದರು.

Leave a Reply

Your email address will not be published. Required fields are marked *