ತಾಳಿಕೋಟಿ: ಅಂಗವೈಕಲ್ಯ ಎಂಬುದು ಶಾಪವೂ ಅಲ್ಲ, ಪಾಪದ ಫಲವೂ ಅಲ್ಲ. ಅದು ಹುಟ್ಟಿನಿಂದ,ವೈಜ್ಞಾನಿಕ ಕಾರಣಗಳಿಂದ ಅಥವಾ ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳಿಂದ ಸಂಭವಿಸಿರುತ್ತದೆ, ಆದರೆ ಸಮಾಜ ಇದನ್ನು ಶಾಪದ ದೃಷ್ಟಿಯಲ್ಲಿ ನೋಡುವುದು ಅಥವಾ ಕೀಳಾಗಿ ಕಾಣುವುದು ಸರಿಯಲ್ಲ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಮುದ್ದೇಬಿಹಾಳ ತಾಲೂಕ ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಮೂರ್ತಿ ಎನ್. ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಮುದ್ದೇಬಿಹಾಳ, ತಾಲೂಕು ಪಂಚಾಯತ್ ಹಾಗು ಇತರ ಎಲ್ಲ ಸರಕಾರಿ ಇಲಾಖೆಗಳು ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಲಾಗಿದೆ ಇದಕ್ಕೆ ವಿಶೇಷ ಚೇತನರೂ ಹೊರತಾಗಿಲ್ಲ, ಸರ್ಕಾರದ ವಿವಿಧ ಇಲಾಖೆ ಹುದ್ದೆಗಳ ನೇಮಕಾತಿಯಲ್ಲಿ ಅವರಿಗೆ ವಿಶೇಷ ಮೀಸಲಾತಿ ಒದಗಿಸಲಾಗಿದೆ ಅದನ್ನು ಅವರು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಮಾತನಾಡಿ ವಿಕಲ ಚೇತನರಿಗೆ ಕೇವಲ ಅನುಕಂಪ ತೋರಿದರೆ ಸಾಲದು ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಅವರಿಗೆ ಶಿಕ್ಷಣ ಉದ್ಯೋಗ ಮತ್ತು ಗೌರವಯುತ ಜೀವನ ಒದಗಿಸುವುದು ಸಮಾಜದ ನೈತಿಕ ಹೊಣೆಗಾರಿಕೆ ಯಾಗಿದೆ. ನಮ್ಮ ಸಮಾಜದಲ್ಲಿ ವಿಕಲಚೇತನ ಯುವಕರ ದೊಡ್ಡ ಸಂಖ್ಯೆ ಇದೆ ಅವರಲ್ಲಿ ಬದುಕಿನ ಭರವಸೆ ಮೂಡಿಸಿ ಮುಖ್ಯ ವಾಹಿನಿಗೆ ತರುವ ಕಾರ್ಯವಾಗಬೇಕಾಗಿದೆ. ವಿಕಲಚೇತನರೂ ಕೀಳುರಿಮೆಯಿಂದ ಹೊರ ಬಂದು ಆತ್ಮಸ್ಥೈರ್ಯ ಬೆಳೆಸಿಕೊಂಡು ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ತಾಲೂಕ ಆಡಳಿತವು ಇದಕ್ಕಾಗಿಯೇ ಕುಂದು ಕೊರತೆಗಳ ಸಭೆಗಳನ್ನು ನಡೆಸುತ್ತಿದ್ದು ವಿಶೇಷ ಚೇತನರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಮುದ್ದೇಬಿಹಾಳ ನ್ಯಾವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ್ ಮಾಲಗತ್ತಿ, ಎಂ ಆರ್ ಡಬ್ಲ್ಯೂ ತಾಲೂಕ ಪಂಚಾಯತ್ ಎಸ್.ಕೆ.ಘಾಟಿ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಸೂಯಾ ಚಲವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರದಿಂದ ವಿಕಲಚೇತನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿಕಲಚೇತನರ ಹಕ್ಕುಗಳು ಘನತೆ ಮತ್ತು ಯೋಗಕ್ಷೇಮದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ, ಅಧ್ಯಕ್ಷ ಸಂಗಣ್ಣ ಹುಣಶ್ಯಾಳ, ತಾಲೂಕ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಎ.ಪಿ.ಕೊಡಗಾನೂರ,ಎ.ಡಿ.ಪಿ. ಆರ್. ಬಿ.ಎಂ.ಸಾಗರ, ಸಹಾಯಕ ಲೆಕ್ಕಾಧಿಕಾರಿ ಬಸನಗೌಡ ಚೌದ್ರಿ,ಎ.ಡಿ.ನರೇಗಾ ಪಿ.ಎಸ್. ಕಸನಕ್ಕಿ, ಮಹಾಂತಗೌಡ ದೊರೆಗೋಳ ಹಾಗೂ ತಾಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *