ತಾಳಿಕೋಟಿ: ಆಲಮಟ್ಟಿ-ಯಾದಗಿರಿ(162 ಕಿ.ಮೀ.) ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್ ಕರೆದಿರುವ ಕ್ರಮವನ್ನು ತಾಳಿಕೋಟಿ ರೈಲು ಮಾರ್ಗ ಹೋರಾಟ ಸಮಿತಿ ಸಂಚಾಲಕ ಮಹಾಂತೇಶ ಮುರಾಳ ಸ್ವಾಗತಿಸಿ ಕೇಂದ್ರ ಸರ್ಕಾರಕ್ಕೆ ಅಭಿನಂದಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ಆಲಮಟ್ಟಿ ಯಾದಗಿರಿ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ನೈರುತ್ಯ ರೈಲ್ವೆ ವಿಭಾಗವು ಟೆಂಡರ್ ಕರೆದಿರುವ ಕ್ರಮ ಅತ್ಯಂತ ಸಂತೋಷದ ವಿಷಯವಾಗಿದೆ. ನಮ್ಮ ಈ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವರಾದ ಅಸ್ವಿನ್ ವೈಷ್ಣವ್ ಅವರಿಗೆ ತಲುಪಿಸಿ ಕಾರ್ಯರೂಪಕ್ಕೆ ತರುವಲ್ಲಿ ರೈಲ್ವೇ ರಾಜ್ಯ ಸಚಿವರಾದ ವಿ.ಸೋಮಣ್ಣ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ರಾಯಚೂರ ಸಂಸದ ಬಿ.ವಿ. ನಾಯಕ ಅವರು ವಿಶೇಷ ಆಸಕ್ತಿ ವಹಿಸಿದ ಫಲವಾಗಿ ಇಂದು ಈ ಕಾರ್ಯ ಆರಂಭವಾಗಿದೆ ಅವರಿಗೆ ನಾನು ಹೋರಾಟ ಸಮಿತಿಗಳಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಅವರು ಆದಷ್ಟು ಬೇಗ ಸದರಿ ಕೆಲಸ ಮುಗಿಸಿ ನಮ್ಮ ಭಾಗದಲ್ಲೂ ರೈಲು ಓಡಾಟ ಆರಂಭಿಸಲು ಕೇಂದ್ರ ಸರ್ಕಾರ ನೆರವಾಗಬೇಕು, ಇದು ಆಲಮಟ್ಟಿ, ನಿಡಗುಂದಿ, ಮುದ್ದೇಬಿಹಾಳ,ತಾಳಿಕೋಟಿ ಹಾಗೂ ಹುಣಸಗಿ ರೈಲು ಮಾರ್ಗ ಹೋರಾಟ ಸಮಿತಿಗಳ ಪರಿಶ್ರಮ ಹಾಗೂ ಸಾರ್ವಜನಿಕರ ಸಹಕಾರಕ್ಕೆ ಸಿಕ್ಕ ಆರಂಭಿಕ ಯಶಸ್ಸು ಆಗಿದೆ ಎಂದು ಅವರು ತಿಳಿಸಿದ್ದಾರೆ.

