ರಾಜ್ಯದ ಎಲ್ಲಾ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ ಗಳು, ಕ್ಲೀನರ್ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ವಿಮುಕ್ತಿಗೊಳಿಸಿ, ಖಾಯಂಗೊಳಿಸಬೇಕು ಹಾಗೂ ಈ ಕಾರ್ಮಿಕರಿಗೆ ಮಾಸಿಕ ವೇತನ 42 ಸಾವಿರ ನಿಗದಿಗೊಳಿಸಬೇಕು ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಸರ್ಕಾರಕ್ಕೆ ಆಗ್ರಹಿಸಿದರು.
ಬೆಳಗಾವಿ ಸುವರ್ಣಸೌಧದ ಮುಂದೆ ಬುಧವಾರ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ಎಐಸಿಸಿಟಿಯು ಸಂಯೋಜಿತ) ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ ಗಳು ಹಾಗೂ ಕ್ಲೀನರ್ ಕಾರ್ಮಿಕರು, ಯಾವುದೇ ಕೆಲಸದ ಭದ್ರತೆ ಇಲ್ಲದೇ ದುಡಿಯುತ್ತಿದ್ದಾರೆ.
ಸೇವಾನಿರತ ಸಾವಿರಾರು ಕಾರ್ಮಿಕರಿಗೆ ಕನಿಷ್ಠ ಕೂಲಿಯಾಗಲಿ, ಸಂವಿಧಾನಬದ್ಧ ಕನಿಷ್ಠ ಸೌಕರ್ಯಗಳಾಗಲಿ ಇದುವರೆಗೂ ದೊರೆತಿಲ್ಲ. ಈ ಕೆಲಸದಿಂದ ಬರುವ ವೇತನವನ್ನೇ ನಂಬಿ ಜೀವನ ನಡೆಸುತ್ತಿರುವ ಈ ಕಾರ್ಮಿಕರು ಬೆಲೆ ಏರಿಕೆಯಿಂದಾಗಿ ದೈನಂದಿನ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಆಗದೇ ಕುಟುಂಬವನ್ನು ನಿರ್ವಹಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ಸಂವಿಧಾನಾತ್ಮಕ ಹಕ್ಕುಗಳನ್ನು ಸರ್ಕಾರವೇ ಕಿತ್ತುಕೊಂಡು, ಈ ವೃತ್ತಿ ವಂಶಪಾರಂಪರ್ಯವಾಗಿ ಮುಂದುವರಿಯುವಂತ ನೋಡಿಕೊಳ್ಳುತ್ತಿದೆ. ಇದು ಖಂಡನಾರ್ಹವಾಗಿದ್ದು, ಸಂವಿಧಾನಬದ್ಧ ಹಕ್ಕುಗಳನ್ನು ಈ ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಮಾತನಾಡಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ 2016 ರಲ್ಲಿ ಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಂಡಿದೆ ಆದರೆ ಇದುವರೆಗೂ ಜಾರಿಗೆ ತಂದಿರುವುದಿಲ್ಲ. ಸ್ವೀಪರ್‌ಗಳನ್ನು ನೇರ ಪಾವತಿಯ ಅಡಿಯಲ್ಲಿ ತಂದು ನಂತರ ಕ್ರಮ ಬದ್ಧಗೊಳಿಸಲಾಗಿದ್ದು, ಚಾಲಕರು, ಕ್ಲೀನರ್‌ಗಳು ಮತ್ತು ಲೋಡರ್‌ಗಳು ಸ್ವಚ್ಛತಾ ಕೆಲಸವನ್ನು ನಿರ್ವಹಿಸುತ್ತಿದ್ದಾಗ್ಯೂ, ಕೂಡ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯ ಅಡಿಯಲ್ಲಿ ಅವರನ್ನು ಶೋಷಣೆ ಮಾಡಲಾಗುತ್ತಿದೆ.
ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ ಸಂದರ್ಭದ ಕಾರ್ಯಕ್ರಮವೊಂದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲಕರು, ಕ್ಲೀನರ್‌ಗಳು ಮತ್ತು ಲೋಡರ್‌ಗಳನ್ನು ನೇರಪಾವತಿಯಡಿ ತರುವ ಭರವಸೆ ನೀಡಿದ್ದರು. ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿಯೂ ಸಹ ಇದನ್ನು ಘೋಷಿಸಿದೆ. 2022ರಿಂದ ಭರವಸೆ ನೀಡುತ್ತಾ ಬರಲಾಗಿದ್ದರೂ, ಇಲ್ಲಿಯವರೆಗೂ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ ಗಳು, ಕ್ಲೀನರ್‌ಗಳು, ದಿನ ನಿತ್ಯವೂ ಬೆವರು ಸುರಿಸಿ ಸ್ವಸ್ಥ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರ ಧ್ಯೇಯೋದ್ದೇಶವು ಖಾಯಂಯಾತಿಯೆಡೆಗೆ ಇರುತ್ತದೆ. ಸರ್ಕಾರ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ ಗಳು, ಕ್ಲೀನರ್ ಕಾರ್ಮಿಕರ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವ ಮೂಲಕ ಅವರು ಘನತೆಯುಕ್ತ ಬದುಕನ್ನು ನಡೆಸಲು ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ: ಮುಖಂಡರಾದ ನಿರ್ಮಲಾ, ವಿಜಯ್ ದೊರೆರಾಜು, ರಾಮಣ್ಣ ವಿಟ್ಲ, ಕೇಶವ ನಾಯಕ್, ಅಶೋಕ್‌ಗೌಡ, ಚಂದ್ರಶೇಖರ್ ಶಿರಗುಪ್ಪಿ, ನಾಗಲಕ್ಷ್ಮಿ, ಅಜೀಜ್ ಜಾಗೀದಾರ್, ಪರಶುರಾಮ, ವೀರೇಶ, ಮಾಯಮ್ಮ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
