ತಾಳಿಕೋಟೆ: ಕನ್ನಡ ಸಾಹಿತ್ಯಲೋಕದಲ್ಲಿ ಕಾದಂಬರಿ ಕ್ಷೇತ್ರಕ್ಕೊಂದು ವಿಶಿಷ್ಟ ಸ್ಥಾನವಿದೆ. ಗದ್ಯರೂಪದ ದೀರ್ಘವಾದ ಕಾಲ್ಪನಿಕ ಕಥನಗಳಲ್ಲಿನ ಪಾತ್ರಗಳು ಕಥಾ ಹಂದರ ಮತ್ತು ಘಟನೆಗಳು ಜೀವನದ ಸತ್ಯಗಳನ್ನು ಸಾಮಾಜಿಕ ವ್ಯವಸ್ಥೆಯನ್ನು, ಮಾನವ ಸಂಬಂಧಗಳನ್ನು ಬಿಚ್ಚಿಡುವ ಪ್ರಯತ್ನವನ್ನು ಕಾದಂಬರಿಗಳಲ್ಲಿ ಕಾಣಬಹುದಾಗಿದೆ ಎಂದು ಸ್ಥಳೀಯ ಜೆಎಸ್.ಜಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದಿನಕರ ಜೋಶಿ ಹೇಳಿದರು.
ಅವರು ಪಟ್ಟಣದ ಪ್ರತಿಭಾಲೋಕ ಕರಿಯರ್ ಅಕಾಡೆಮಿಯಲ್ಲಿ ಸ್ಥಳೀಯ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ವಸುಧೇಂದ್ರ ಅವರು ಬರೆದ ‘ರೇಷ್ಮೆ ಬಟ್ಟೆ’ ಕಾದಂಬರಿಯ ಅವಲೋಕನ ಮಾಡಿ ಭಾನುವಾರ ಸಂಜೆ ಮಾತನಾಡಿದರು.
ಕಾದಂಬರಿಗಳಲ್ಲಿ ಹಲವು ಕವಲುಗಳನ್ನು ಕಾಣಬಹುದಾಗಿದ್ದು ವಸುಧೇಂದ್ರ ಅವರ ರೇಷ್ಮೆ ಬಟ್ಟೆ ಕಾದಂಬರಿ ಆಸಕ್ತಿದಾಯಕವಾದುದಾಗಿದೆ. ರೇಷ್ಮೆ ಬಟ್ಟೆ ಜಗತ್ತಿಗೆ ಪರಿಚಯಸಿಕೊಂಡ ಹಿನ್ನೆಲೆಗಳನ್ನು ಬರೆಯಲು ಹೊರಟು ನಾಲ್ಕೂವರೆ ವರ್ಷಗಳ ಕಾಲ 50ಕ್ಕೂ ಅಧಿಕ ಗ್ರಂಥಗಳನ್ನು ಅಧ್ಯಯನ ಮಾಡಿ, ಅಂತರ್ಜಾಲದ ಪುಟಗಳನ್ನು ಹೆಕ್ಕಿ ಏಳು ತಿಂಗಳ ಕಾಲ ಬರೆವಣಿಗೆ ಮಾಡಿ ಐದು ಅಧ್ಯಾಯಗಳಲ್ಲಿ 450 ಪುಟಗಳ ಕಾದಂಬರಿಯನ್ನು ಓದುಗನಿಗೆ ಇಡುತ್ತಾರೆ
. ರೇಷ್ಮೆ ಬಟ್ಟೆ ಜಗತ್ತಿಗೆ ಪರಿಚಯಿಸಿಕೊಳ್ಳಲು ಕಾರಣವಾದ ಘಟನೆಯ ಎಳೆ ಹಿಡಿದು ಹೋಗುವ ಅವರು ಒಂದನೆಯ ಹಾಗೂ ಎರಡನೆಯ ಶತಮಾನದ ಅವಧಿಯಲ್ಲಿ ನಡೆದ ಘಟನಾವಳಿಗಳನ್ನು ಯವನರು, ರೋಮನ್ನರು, ಗ್ರೀಕರು, ಪಾರ್ಥಿಯನ್ನರು, ಚೀನಾ ಸಾಮ್ರಾಜ್ಯ, ಕಾನಿಷ್ಕನ ಆಡಳಿತ ಹೂಣರ ದಾಳಿಗಳು, ಬುದ್ಧನ ಸಂದೇಶಗಳ ಪ್ರಸಾರಕ್ಕೆ ಅವರ ಅನುಯಾಯಿಗಳು ಬಿಕ್ಕುಗಳು ಪಡುವ ಪರಿಪಾಟಲುಗಳು, ಅವರ ತ್ಯಾಗ ಜೀವನ, ಅಂದಿನ ಸಾಮಾಜಿಕ ಆರ್ಥಿಕ ಸ್ಥಿತಿಗಳು, ವ್ಯಾಪಾರ, ಕೃಷಿ, ವಾಣಿಜ್ಯ ಗಳ ಮೂಲಕ ಸಾಮ್ರಾಜ್ಯ ವಿಸ್ತರಣೆ ತುಷಾರ ಜನಾಂಗ, ಪಾರಸಿಕರ ಜೀವನಶೈಲಿ, ಆಚರಣೆಗಳು, ಚೀನಾಗೋಡೆಯ ನಿರ್ಮಾಣ ಮೊದಲಾದವುಗಳೊಂದಿಗೆ ಥಳುಕು ಹಾಕಿಕೊಂಡು ಕುತೂಹಲ ಹುಟ್ಟಿಸುತ್ತ ಮುಂದೆ ಸಾಗುತ್ತದೆ.
ಇದು ಇತಿಹಾಸದ ಪುಟಗಳನ್ನೂ ತೆರೆಯುತ್ತದೆ. ನಾಡಿನ ಅಭಿವೃದ್ಧಿಯಲ್ಲಿ ಕಾಡಿನ ನಾಶ ಅಂದೇ ಆರಂಭವಾಗಿರುವುದನ್ನು ಕಾಣಬಹುದಾಗಿದೆ.
ಗುಲಾಮಗಿರಿ, ಶೋಷಣೆ, ನಾಣ್ಯಗಳ ಚಲಾವಣೆ ಚಿನ್ನ, ಬೆಳ್ಳಿ, ಕಂಚು ಹಿತ್ತಾಳೆ ನಾಣ್ಯಗಳ ವಿನಿಮಯ, ಧಾರ್ಮಿಕ ಕೇಂದ್ರಗಳು ವ್ಯಾಪಾರದ ಕೇಂದ್ರವಾಗಬೇಕೆಂಬ ಚಿಂತನೆಗಳನ್ನು ಕಾಣುತ್ತೇವೆ.
ಚೀನಿ ದುಕುಲ ಮತ್ತು ತಥಾಗತ, ಹವಿನೇಮ, ಶಿಖನೇಮ, ಸಗನೇಮಿ, ಜ್ಞಾನಸೇನ ಬಿಕ್ಕು, ಮಧುಮಾಯಾ ಛಾನಲೀಹ್ವಾಳ ಸೇಡು ಮೊದಲಾದ ಪಾತ್ರಗಳು ಕಾದಂಬರಿಯ ಓಟಕ್ಕೆ ಭಂಗ ತರದಂತೆ ನಡೆದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ ಎಂದರು.
ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ಬಿ ಕೊಂಗಂಡಿ, ನೂತನ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ ಮಾತನಾಡಿದರು. ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರಿಕಾಂತ ಪತ್ತಾರ ನಿರ್ವಹಿಸಿದರು. ಉಪಾಧ್ಯಕ್ಷ ಆರ್.ಬಿ.ದಮ್ಮೂರಮಠ ವಂದಿಸಿದರು.ಐವತ್ತಕ್ಕು ಅಧಿಕ ಸಹೃದಯಿಗಳು ಉಪಸ್ಥಿತರಿದ್ದರು.

