ಜಾಲಹಳ್ಳಿ, ಜುಲೈ 5: ಚುನಾವಣಾ ಆಯೋಗದ ನಿರ್ದೇಶನದಂತೆ ಜಾಲಹಳ್ಳಿ ಗ್ರಾಮದ 2ನೇ ವಾರ್ಡಿನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SSR) ಕಾರ್ಯ ಚುರುಕಿನಿಂದ ನಡೆಯುತ್ತಿದೆ.
ವಾರ್ಡಿನ ಬೂತ್ ಮಟ್ಟದ ಅಧಿಕಾರಿ (BLO) ಆಂಜನೇಯ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು, ಹೆಸರು, ವಿಳಾಸ ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರಾದ ಹುಸೇನ್ ನಾಸಿ ಮಾತನಾಡಿ, “ಪ್ರಜಾಪ್ರಭುತ್ವದ ಯಶಸ್ಸಿಗೆ ನಿಖರವಾದ ಮತದಾರರ ಪಟ್ಟಿ ಅತ್ಯಂತ ಅಗತ್ಯವಾಗಿದೆ. ನಮ್ಮ ವಾರ್ಡಿನಲ್ಲಿ ನಡೆಯುತ್ತಿರುವ ಈ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 18 ವರ್ಷ ಪೂರ್ಣಗೊಂಡಿರುವ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಪರಿಷ್ಕರಣೆ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಾರ್ಡಿನ ಪ್ರಮುಖರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಬಾಬಾ ಮೆಡಿಕಲ್, ಹುಸೇನ್ ನಾಸಿ, ಮೈಬೂಬ್ ಬುoಕಲದೊಡ್ಡಿ, ಶಬ್ಬೀರ್, ಗುಲಾಮ ಹುಸೇನ್, ವಾಜಿದ್ ಹಾಗೂ ವಾರ್ಡಿನ ಸಾರ್ವಜನಿಕರು ಉಪಸ್ಥಿತರಿದ್ದರು.

