ಸುಮಾರು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಛಾಯಾಗ್ರಾಹಕರಾಗಿ ಮತ್ತು ಪತ್ರಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆದು, ಬೆಳೆಯುತ್ತಿರುವ ಸ್ನೇಹಿಜೀವಿ ಸೈಯದ್ ಅಬ್ದುಲ್ ಗಯಾಸ್ ಅವರಿಗೆ ಇಂದು ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ರಾಯಚೂರು ಮತ್ತು ಲೋಹಿಯಾ ಪ್ರತಿಷ್ಠಾನ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎಂದೂ ಮರೆಯದ ಹಾಡು ಹಳೆಯ ಗೀತೆಗಳ ಮಧುರ ಗಾಯನ ಕಾರ್ಯಕ್ರಮದಲ್ಲಿ
ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನವಾಗಲಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಾಧ್ಯಂತ ಗಯಾಸ್ ಅವರು ಉತ್ತಮ. ಫೋಟೋಗ್ರಾಫರ್ ಎಂದೆ ಜನರ ಮನದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಸಣ್ಣ,ದೊಡ್ಡ ಕಾರ್ಯಕ್ರಮಗಳಿದ್ದರೂ ಅಲ್ಲಿ ಗಯಾಸ್ ಅವರು ಇದ್ದೇ ಇರುತ್ತಾರೆ. ಇತ್ತೀಚಿನ ಆರೇಳು ವರ್ಷಗಳಿಂದ ಗಯಾಸ್ ಅವರು ಜನವಾದಿ ದಿನಪತ್ರಿಕೆ ಯ ತಾಲೂಕಾ ವರದಿಗಾರರಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಈ ಅನುಪಮವಾದ ಸೇವೆ ಗುರುತಿಸಿ ಕಲಾ ಸಂಕುಲ ಸಂಸ್ಥೆಯು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಗಯಾಸ್ ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಸಂದ ಅರ್ಹ ಗೌರವವಾಗಿದೆ.
ಸೈಯದ್ ಅಬ್ದುಲ್ ರಜಾಕ ಮತ್ತು ಅಕ್ತರ್ ಬೇಗ್ಂ ದಂಪತಿಗಳ ಪುಣ್ಯ ಗರ್ಭದಲ್ಲಿ ದಿನಾಂಕ 01-04-1978 ರಲ್ಲಿ ರಾಯಚೂರಿನಲ್ಲಿ ಜನಿಸಿದ ಸೈಯದ್ ಅಬ್ದಲ್ ಗಯಾಸ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಸ್ಕಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾನ್ವಿ ಪಟ್ಟಣದ ಆದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಮಾನ್ವಿ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ಆರ್ಟ್ ಆಫ್ ಡಿಪ್ಲೊಮಾ ಕೋರ್ಸ್ ನ್ನು ರಾಯಚೂರಿನಲ್ಲಿ ಮುಗಿಸಿದರು.
ಗಯಾಸ್ ಅವರು ಎಸ್. ಎಸ್ .ಎಲ್. ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಮಾನ್ವಿ ಪಟ್ಟಣದ ಪಾಂಡುರಂಗ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಸಹೋದರರು ನಡೆಸುತ್ತಿದ್ದ ಶ್ರೀ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಆ ಅಂಗಡಿಗೆ ಅನೇಕ ಪತ್ರಕರ್ತರು ಆಗಮಿಸುತ್ತಿದ್ದರು. ಆ ಸಂದರ್ಭದಲ್ಲಿ ಶೆಟ್ಟಿ ಸಹೋದರರು ಗಯಾಸ್ ಅವರಲ್ಲಿ ಅಡಗಿದ್ದ ಫೋಟೋಗ್ರಫಿ ಕಲೆಯನ್ನು ಗುರುತಿಸಿದ್ದರು.ಈ ಪ್ರತಿಭೆಯನ್ನು ಅನೇಕ ಪತ್ರಕರ್ತ ಮಿತ್ರರಿಗೆ ಪರಿಚಯಿಸಿದರು. ಅಂದಿನಿಂದ ಗಯಾಸ್ ಅವರು ಪ್ರೆಸ್ ಫೋಟುಗ್ರಾಪರ್ ಆಗಿ ತಮ್ಮನ್ನು ತಾವು ಗುರುತಿಸುಕೊಳ್ಳಲು ಆರಂಭಿಸಿದರು.
ಮಾನ್ವಿ ಪಟ್ಟಣದಲ್ಲಿ ಅನೇಕ ಸಂಘ ಸಂಸ್ಥೆಗಳವರು ಮತ್ತು ಸಂಘಟನೆಗಳವರು ಯಾವುದೇ ಸಮಾರಂಭ ಪ್ರತಿಭಟನೆ, ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮಗಳಿದ್ದರೆ ಗಯಾಸ್ ಅವರಿಗೆ ಆಹ್ವಾನಿಸಿ ಫೋಟು ತೆಗೆದು ಪತ್ರಕರ್ತರಿಗೆ ಕೊಡಲು ಹೇಳಿ 300 ರೂಪಾಯಿ, 500 ರೂಪಾಯಿ ನೀಡಲಾರಂಭಿಸಿದರು. ಈ ಹಣವನ್ನು ತಮ್ಮ ಓದು ಮತ್ತು ಬದುಕಿಗೆ ಆಧಾರವಾಗಿಸಿಕೊಂಡರು.
ಮಾನ್ವಿಯಲ್ಲಿ ನಡೆಯುವ ಕಲ್ಮಠದ ಗಾರಿಗೆ ಜಾತ್ರೆ, ದಸರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ,
ಕಬ್ ಮತ್ತು ಬುಲ್ ಬುಲ್ ಸಮ್ಮೇಳನಗಳಲ್ಲಿ ಹಾಗೂ ಇನ್ನೀತರ ಕಾರ್ಯಕ್ರಮಗಳಲ್ಲಿ ಇವರ ಸೇವೆ ಗುರುತಿಸಿ ಉತ್ತಮ ಫೋಟೋಗ್ರಾಫರ್ ಎಂದು ಸನ್ಮಾನಿಸಿ ಗೌರವಿಸಿದ್ದಾರೆ. ರಾಯಚೂರಿನಲ್ಲಿ ನಡೆದ 82 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಛಾಯಾಗ್ರಾಹಕ ಎಂದು
ಜಿಲ್ಲಾಧಿಕಾರಿಗಳು ಸನ್ಮಾನಿಸಿ ಗಯಾಸ್ ಅವರನ್ನು ಅಭಿನಂದಿಸಿ ಗೌರವಿಸಿದ್ದಾರೆ.
ಗಯಾಸ್ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ, ತಾಲೂಕಾ ಉಪಾಧ್ಯಕ್ಷರಾಗಿ, ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿರುವ ಗಯಾಸ್ ಅವರು ಸರಳ ಜೀವನ ನಡೆಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.
ಇವರ ಸೇವೆಗೆ ಈಗಾಗಲೇ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡಲ್ಪಡುವ ಜಿಲ್ಲಾ ಉತ್ತಮ ವರದಿಗಾರ ಪ್ರಶಸ್ತಿ ಮತ್ತು ತಾಲೂಕಾ ಉತ್ತಮ ಪತ್ರಕರ್ತ ಪ್ರಶಸ್ತಿಗಳು ಸಂದಿವೆಯಲ್ಲದೆ ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಮಠ ಮಾನ್ಯಗಳು, ಸಮುದಾಯದ ಸಂಘಟನೆಗಳು ಗಯಾಸ್ ಅವರ ಸೇವೆ ಗುರುತಿಸಿ ಅನೇಕ ವೇದಿಕೆಗಳಲ್ಲಿ ಹತ್ತು ಹಲವು ಸನ್ಮಾನಗಳು, ಗೌರವಗಳು ಇವರಿಗೆ ಒಲಿದು ಬಂದಿವೆ.
ಇಂದು ಸಂಜೆ 6 ಗಂಟೆಗೆ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಲಿರುವ ಸೈಯದ್ ಅಬ್ದುಲ್ ಗಯಾಸ್ ಅವರ ಪತ್ರಿಕಾ ರಂಗದ ಸೇವೆ ಹೀಗೇ ಸದಾ ಇನ್ನೂ ನೂರ್ಕಾಲ ಮುಂದುವರೆಯಲಿ ಇಂತಹ ಹತ್ತು ಹಲವು ಪ್ರಶಸ್ತಿಗಳು ಅವರ ಮುಡಿಗೇರುತ್ತಿರಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸಿ ಅಭಿನಂದಿಸುತ್ತೇನೆ.
ರಮೇಶಬಾಬು ಯಾಳಗಿ, ಮಾನ್ವಿ

