ಜಾಲಹಳ್ಳಿ, ಜುಲೈ 4: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ (SVEEP) ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮತದಾರರ ಮಾಹಿತಿ ಕೇಂದ್ರ (Voter Facilitation Centre) ಆರಂಭಿಸಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SSR) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮಿ ಅವರು, ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಹೆಸರು ಕೈಬಿಡುವಿಕೆ ಸೇರಿದಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಿಧ ಸೇವೆಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಅರ್ಹ ಯುವ ಮತದಾರರು ಹಾಗೂ ಸಾರ್ವಜನಿಕರು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜೊತೆಗೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಾಲಹಳ್ಳಿಯ ರಂಗನಾಥ ದೇವಸ್ಥಾನ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಹೊಸದಾಗಿ ಆರಂಭಿಸಿರುವ ಮತದಾರರ ಮಾಹಿತಿ ಕೇಂದ್ರದ ಕುರಿತು ಜಾಗೃತಿ ಪ್ರಚಾರವೂ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರೆಹಮಾನ್ ಖುರೇಷಿ ಮಾತನಾಡಿ, ಪ್ರತಿಯೊಬ್ಬ ಅರ್ಹ ನಾಗರಿಕರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಂಡು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಯ್ಯಪ್ಪ, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರೆಹಮಾನ್ ಖುರೇಷಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಮುದುರಂಗಪ್ಪ, ಬಸವರಾಜ್, ರಂಗಪ್ಪ ಹಾಗೂ ಸಿಬ್ಬಂದಿ ವರ್ಗದವರು, ಸ್ವೀಪ್ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *