ಜಾಲಹಳ್ಳಿ, ಜೂನ್ 14: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಯಿತು. ದೇವದುರ್ಗ ವಿಭಾಗದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಪುಂಡಲಿಕ್ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪಿಎಸ್‌ಐ ವೈಶಾಲಿ ಜಳಕಿ ವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಪಿಎಸ್‌ಐ ವೈಶಾಲಿ ಜಳಕಿ, ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಮನೋಭಾವದಿಂದ ಆಚರಿಸುವಂತೆ ಕರೆ ನೀಡಿದರು.

ಮುಖಂಡ ಭೂತಪ್ಪ ದೇವರಮನೆ ಮಾತನಾಡಿ, ಜಾಲಹಳ್ಳಿ ಮೊಹರಂ ಹಬ್ಬವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದು, ಹಬ್ಬದ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ಮುಖಂಡ ಶಬ್ಬೀರ್ ಜಾಲಹಳ್ಳಿ ಮಾತನಾಡಿ, ಜಾಲಹಳ್ಳಿಯ ಮೊಹರಂ ಹಬ್ಬವು ರಾಜವಂಶಸ್ಥರಾದ ರಾಜ ರಂಗಪ್ಪ ನಾಯಕ ಅವರ ನೇತೃತ್ವದಲ್ಲಿ ನಡೆಯುವ ವಿಶಿಷ್ಟ ಆಚರಣೆಯಾಗಿದ್ದು, ವತಂದಾರರು ಆಗಮಿಸಿದ ಬಳಿಕವೇ ಕಾರ್ಯಕ್ರಮಗಳು ಆರಂಭಗೊಳ್ಳುವುದು ಸಂಪ್ರದಾಯವಾಗಿದೆ ಎಂದು ತಿಳಿಸಿದರು. ಮೊಹರಂ ಕೊನೆಯ ದಿನ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಅವರು ಆಗ್ರಹಿಸಿದರು.

ಸರ್ಕಲ್ ಇನ್ಸ್‌ಪೆಕ್ಟರ್ ಪುಂಡಲಿಕ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು. ಇಮಾಮ್ ಹುಸೇನ್ ಹಾಗೂ ಅವರ ಕುಟುಂಬದವರ ತ್ಯಾಗದ ಸ್ಮರಣಾರ್ಥ ಆಚರಿಸುವ ಮೊಹರಂ ಹಬ್ಬವು ಎಲ್ಲ ಧರ್ಮಗಳ ಜನರನ್ನು ಒಗ್ಗೂಡಿಸುವ ಹಬ್ಬವಾಗಿದೆ ಎಂದು ವಿವರಿಸಿದರು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಯುವಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ ಅವರು, ಅಕ್ರಮ ಮದ್ಯ ಮಾರಾಟ ನಿಯಂತ್ರಣ ಹಾಗೂ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಬಾಬಾ ಮೆಡಿಕಲ್ ಮಾತನಾಡಿ, ಜಾಲಹಳ್ಳಿಯ ಮೊಹರಂ ಹಬ್ಬವು ರಾಜ ರಂಗಪ್ಪ ನಾಯಕ್ ಹಾಗೂ ಊರಿನ ವತಂದಾರರ ನೇತೃತ್ವದಲ್ಲಿ ನಡೆಯುವ ಅಪರೂಪದ ಆಚರಣೆಯಾಗಿದ್ದು, ಎಲ್ಲಾ ಸಮಾಜದವರ ಸಹಭಾಗಿತ್ವ ಗ್ರಾಮಕ್ಕೆ ವಿಶೇಷತೆ ತಂದುಕೊಟ್ಟಿದೆ ಎಂದರು.

ಹಿರಿಯರಾದ ಸಾಬಣ್ಣ ಕಮಲದಿನ್ನಿ ಅವರು ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಪುಂಡಲಿಕ್ ಅವರನ್ನು ಸ್ವಾಗತಿಸಿ, ಜಾಲಹಳ್ಳಿ ಮೊಹರಂ ಹಬ್ಬವು ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ ಎಂದು ಹೇಳಿದರು. ಇದೇ ವೇಳೆ ಡಿಎಸ್ಎಸ್ ಮುಖಂಡ ಬಾಳಪ್ಪ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಶ್ರೀದರ ದೇಸಾಯಿ, ರಾಜಾ ವಾಸುದೇವ ನಾಯಕ್, ಶಂಕರಗೌಡ ಮಾಲಿ ಪಾಟೀಲ್, ವೆಂಕೋಬ ತೋಟದ್, ರಂಗಪ್ಪ ಬಂಡಿ, ಕಲೀಮ್ ಉದ್ದಾರ, ರಮೇಶ್ ಬಾಗೂರು, ಬಾಳಪ್ಪ ಡಿಎಸ್ಎಸ್, ಬಾಬಾ ಮೆಡಿಕಲ್ ಯಾಸಿನ್ ಮುಲ್ಲಾ, ರಾಜ್ ಮಹಮ್ಮದ್ ಕಲೆಗಾರ, ಹೈದರ್ ಸಾಬ್ ಉದ್ದಾರ, ಹುಸೇನ್ ಭಾಷಾ ಸುರ್ನೋಬತ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೀಶ ಅರಕೇರಿ, ಸದಸ್ಯ ಮಕ್ತೂಮ್ ಪರಾಶಿ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *