ದೇವದುರ್ಗ, ಜೂನ್ 10: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿರುವುದು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘದ ನಿರಂತರ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಹೇಶ್ ಹುಬ್ಬಳ್ಳಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಸಮಾವೇಶದಲ್ಲಿ ಅಂಗೀಕರಿಸಲಾದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಸಂಘದ ನಿರಂತರ ಹೋರಾಟ ಮತ್ತು ಮನವಿಗಳಿಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಮೇ 25, 2026ರಂದು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಮೂಲಕ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಸರ್ಕಾರ ಸಾಮಾಜಿಕ ನ್ಯಾಯದತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ಮೀಸಲಾತಿ ಆಧಾರಿತ ಬಡ್ತಿ, ಎಸ್‌ಸಿ/ಎಸ್‌ಟಿ ನೌಕರರ ಮೇಲಿನ ದೌರ್ಜನ್ಯಗಳ ತನಿಖೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ, ಅನುಕಂಪ ಆಧಾರಿತ ನೇಮಕಾತಿಗಳ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವುದಾಗಿ ತಿಳಿಸಿದರು.

ಇದಲ್ಲದೆ ಎಸ್‌ಸಿ/ಎಸ್‌ಟಿ ನೌಕರರಿಗೆ ಗೃಹ ಸಾಲ ಮುಂಗಡ ಸೌಲಭ್ಯ ಹಾಗೂ ಉನ್ನತ ವ್ಯಾಸಂಗಕ್ಕಾಗಿ ವೇತನ ಸಹಿತ ರಜೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಬೇಡಿಕೆಗಳ ಈಡೇರಿಕೆಗೆ ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಮಹೇಶ್ ಹುಬ್ಬಳ್ಳಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಘಟಕದ ಪದಾಧಿಕಾರಿ ಡಿ. ರಾಜಕುಮಾರ್ ಅವರು, ಸರ್ಕಾರ ಹಾಗೂ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸಂಘದ ಪರವಾಗಿ ಹಾಗೂ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದರು.

ಬಾಕ್ಸ್ ಐಟಂ

“ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿಗಳ ಆದೇಶ ಸಂತಸದ ವಿಚಾರ. ಇದು ನೌಕರರ ಸಂಘದ ಹೋರಾಟಕ್ಕೆ ಸಂದ ಜಯವಾಗಿದ್ದು, ಸಾವಿರಾರು ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿದೆ. ಸರ್ಕಾರ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿ.” ಎಂದು ರಾಜ್ಯ ಘಟಕದ ಪದಾಧಿಕಾರಿ ಡಿ. ರಾಜಕುಮಾರ್ ಸಂತಸ ವ್ಯಕ್ತಪಡಿಸಿದರು.

ಮಹೇಶ್ ಪರಿಶಿಷ್ಟ ಪಂಗಡ ಸಂಘದ ರಾಜ್ಯ ಅಧ್ಯಕ್ಷರು

Leave a Reply

Your email address will not be published. Required fields are marked *