ತಾಳಿಕೋಟಿ: ಈ ಜಗತ್ತಿಗೆ ನಮ್ಮನ್ನು ಸಂಸ್ಕರಿಸಲು ಬಂದ ಮಹಾತ್ಮರ, ದಾರ್ಶನಿಕರ, ಶರಣರ ಹಾಗೂ ಮಹಾಪುರುಷರ ಜೀವನ ಚರಿತ್ರೆಯನ್ನು ಪುರಾಣ ಪ್ರವಚನಗಳ ಮೂಲಕ ಆಲಿಸುವುದರಿಂದ ನಮ್ಮ ಜೀವನ ಪಾವನಗೊಳ್ಳುತ್ತದೆ ಎಂದು ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪೂಜ್ಯಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಗುರುವಾರ ಪಟ್ಟಣದ ರಾಜವಾಡೆ ಆವರಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯಿಂದ 3 ನೇ ವರ್ಷದ ವರ್ಷಾಚರಣೆ ಪ್ರಯುಕ್ತ 12 ದಿನಗಳ ಕಾಲ ಹಮ್ಮಿಕೊಂಡ ವೀರರಾಣಿ ಕಿತ್ತೂರು ಚೆನ್ನಮ್ಮ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೀರರಾಣಿ ಕಿತ್ತೂರು ಚೆನ್ನಮ್ಮಳ ಜೀವನ ಚರಿತ್ರೆಯನ್ನು ಪ್ರತಿಯೊಬ್ಬ ದೇಶಭಕ್ತನು ತಿಳಿದುಕೊಳ್ಳಬೇಕು ಅವಳ ಶೌರ್ಯ ಸಾಹಸ ನಮಗೆಲ್ಲರಿಗೂ ಮಾದರಿಯಾಗಿದೆ. ಇಲ್ಲಿ 12 ದಿನಗಳ ಕಾಲ ಪುರಾಣ ಜರುಗಲಿದೆ ಅದರ ಸದುಪಯೋಗ ನೀವೆಲ್ಲರೂ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿದಿನದ ಕಾರ್ಯಕ್ರಮದ ಅಂತ್ಯದಲ್ಲಿ ಜರುಗಲಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದ ನಿಮಿತ್ಯ ಮೊದಲ ದಿನದಲ್ಲಿ 22 ರೈತ ದಂಪತಿಗಳನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕುಮಾರ ಬಾವಿಮನಿ ಹಾಗೂ ಬಸನಗೌಡ ಬಿರಾದಾರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಸಿ.ಪಾಟೀಲ, ಅಧ್ಯಕ್ಷರಾದ ನೀಲಮ್ಮಗೌಡತಿ ಪಾಟೀಲ, ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *