ರಾಯಚೂರು ಏಪ್ರಿಲ್ 16 (ಕರ್ನಾಟಕ ವಾರ್ತೆ): ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಎಚ್‌ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಅರ್ಹ ವಯಸ್ಸಿಗೆ ಲಸಿಕೆ ಪಡೆದರೆ ಭವಿಷ್ಯದ ಆರೋಗ್ಯಕ್ಕೆ ಭದ್ರತೆ ಸಿಗುತ್ತದೆ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ.ನಂದಿತಾ ಎಮ್.ಎನ್. ಅವರು ಹೇಳಿದರು.
ಇತ್ತೀಚೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಹಳ್ಳಿಗಳಿಗೆ ಭೇಟಿ ಹೆಚ್‌ಪಿವಿ ಲಸಿಕೆ ಕಾರ್ಯವನ್ನು ಪರಿಶೀಲಿಸಿ, ಅವರು ಮಾತನಾಡಿದರು.
ಈ ಲಸಿಕೆ ಹೊಸದೇನಲ್ಲ, ಜಗತ್ತಿನಾದ್ಯಂತ ಈಗಾಗಲೇ 50 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ. ಕಳೆದ 15 ವರ್ಷಗಳ ಅಂಕಿ-ಅಂಶಗಳು ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿವೆ ಎಂದರು.
ಸರ್ಕಾರದ ಮಾರ್ಗಸೂಚಿಯಂತೆ 14 ವರ್ಷ ಪೂರೈಸಿದ ಮತ್ತು 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ ಲಸಿಕೆಯನ್ನು ಪಾಲಕರು ಯಾವುದೇ ತಪ್ಪು ನಂಬಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈಜ್ಞಾನಿಕವಾಗಿ ಗೊತ್ತಿಲ್ಲದೆ ಕೆಲವರು ಹರಡುವ ಸುಳ್ಳು ಸುದ್ದಿಗಳನ್ನು ನಂಬದೆ, ಯಾವುದೇ ಹಿಂದೇಟು ಹಾಕದೆ ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ದೂರವಿರಿಸಲು ಎಲ್ಲ ಪಾಲಕರು ಮುಂದೆ ಬರಬೇಕು ಎಂದರು.
ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ ಅತ್ಯಂತ ಉಪಯುಕ್ತವಾಗಿದ್ದು, ಈಗಾಗಲೆ ಲಸಿಕೆಯನ್ನು ಹಾಕಲಾಗುತ್ತಿದ್ದು, ದಯವಿಟ್ಟು ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆ ಹಾಕಿಸಬೇಕೆಂದರು.
ಗರ್ಭಕಂಡದ ಕ್ಯಾನ್ಸರ್‌ಗೆ ಕಾರಣಗಳು: ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಗರ್ಭಕಂಡದಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ದೇವದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿ ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಈ ವೇಳೆ ಲಸಿಕೆ ಹಾಕಿಸಲು ನಿರಾಕರಿಸಿದ್ದ ಕುಟುಂಬಗಳ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಭೇಟಿ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಶಾಂತಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಪುನೀತ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಈರಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸಿಬ್ಬಂದಿಯವರಾದ ಶಾರೋನ, ನರಸಮ್ಮ, ಮನೋಜ್ ಸೇರಿದಂತೆ ಪಿ.ಹೆಚ್.ಸಿ.ಓ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರ ಇದ್ದರು.

