ರಾಯಚೂರು: ರಾಯಚೂರಿನಲ್ಲಿ ದಿನೇ ದಿನೇ ಬಿಸಿಲಿನ ಶಕೆ ಹೆಚ್ಚಳವಾಗುತ್ತಿದೆ. 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂಬ ವರದಿಯು ನಾಗರಿಕರನ್ನು ಆತಂಕಕ್ಕೆ ದೂಡಿದೆ. ನಾಗರಿಕರು ಬೆಳಿಗ್ಗೆ 10 ಗಂಟೆಯಿಂದಲೇ ಹೊರಗಡೆ ಬರಲು ಅರಸಾಹಸ ಪಡುತ್ತಿದ್ದಾರೆ. ಬಿಸಿಲಿನ ಜಳ ಮತ್ತು ಬಿಸಿ ಮಗಾಳಿ ಜನರನ್ನು ಹೈರಾಣು ಗೊಳಿಸಿದೆ. ಸಂಜೆ 4:30 ಆದರೂ ಸಹ ಬಿಸಿಲಿನ ಜಳ ಕಡಿಮೆಯಾಗುತ್ತಿಲ್ಲ. ರಸ್ತೆ ಸಂಚಾರದ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ವೃದ್ಧರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಬಿಸಿಲಿನ ತಾಪಮಾನದಿಂದ ದೇಹದ ಅಸ್ವಸ್ಥತೆ, ದಾಹ, ತಲೆ ಸುತ್ತುವುದು ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.
ಆದ್ದರಿಂದ ಮಹಾನಗರ ಪಾಲಿಕೆಯು ಜನರ ಆರೋಗ್ಯದ ದೃಷ್ಟಿಯಿಂದ ರಾಯಚೂರು ನಗರದಲ್ಲಿ ಸಿಗ್ನಲ್ ಇರುವ ಪ್ರತಿ
ವೃತ್ತದಲ್ಲಿ ನೆರಳಿನ ವ್ಯವಸ್ಥೆಯನ್ನು ಮಾಡಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ( ಎಐಡಿವೈಓ) ಸಂಘಟನೆಯು ನಾಗರಿಕರ ಪರವಾಗಿ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿತು.

ಜಿಲ್ಲೆಯಲ್ಲಿ ಒಂದೂವರೆ ತಿಂಗಳು ಪ್ರಕರ ಬಿಸಿಲು ಮುಂದುವರೆಯಲಿದೆ. ಅಷ್ಟೇ ಅಲ್ಲದೇ ಒಂದು ವಾರ ಗರಿಷ್ಠ 42 ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಹೇಳಿರುವುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ನೆರಳಿನ ವ್ಯವಸ್ಥೆ (ಶೆಡ್‌ಗಳು ಅಥವಾ ಷೆಲ್ಟರ್‌ಗಳು) ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ.

ಮಹಾನಗರ ಪಾಲಿಕೆಯು ನೆರಳಿನ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದೆ. ಆದರೆ ಅತ್ಯಂತ ತುರ್ತಾಗಿ ಈ ನೆರಳಿನ ವ್ಯವಸ್ಥೆಯನ್ನು ಮಾಡಬೇಕು. ಪಾಲಿಕೆಯು ಕೆಲವು ಸ್ಥಳಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ‘ಅಮೃತ ನೆರಳು’ ಕೇಂದ್ರಗಳನ್ನು ಕಳೆದ ವರ್ಷವೇ ಸ್ಥಾಪಿಸಿರುವುದು ಸ್ವಾಗತಾರ್ಹವಾದ ಕೆಲಸವಾಗಿದೆ. ಆದರೆ ಅವು ಕೆಲವೇ ವೃತ್ತಗಳಿಗೆ ಸೀಮಿತಗೊಂಡಿವೆ. ಅವುಗಳನ್ನು ಮತ್ತಷ್ಟು ಸ್ಥಳಗಳಲ್ಲಿ ಸ್ಥಾಪಿಸಬೇಕು, ತಣ್ಣನೆಯ ಕುಡಿಯುವ ನೀರನ್ನು ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕು ಹಾಗೂ ಬಿಸಿಲಿನ ತಾಪಮಾನವನ್ನು ನಿಯಂತ್ರಿಸಲು ರಸ್ತೆಯ ಮೇಲೆ ನೀರು ಸಿಂಪಡಿಸುವ ಕ್ರಮವನ್ನು ಕೈಗೊಳ್ಳಬೇಕೆಂದು ಈ ಮೂಲಕ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್( ಎಐಡಿವೈಓ) ಜಿಲ್ಲಾ ಸಮಿತಿ ಮನವಿ ಮಾಡಿ ಒತ್ತಾಯಿಸಿದೆ.

ಬೇಡಿಕೆಗಳು :
1. ರಾಯಚೂರು ನಗರದ ಸಂಚಾರ ಸಿಗ್ನಲ್ ಇರುವ ವೃತ್ತಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಬಿಸಿಲಿನಿಂದ ರಕ್ಷಣೆ ಒದಗಿಸಲು ನೆರಳಿನ ವ್ಯವಸ್ಥೆ ಮಾಡಬೇಕು.
2. ಅಮೃತ ನೆರಳು ಎಂಬ ಕುಟೀರಗಳನ್ನು ಮತ್ತಷ್ಟು ವೃತ್ತಗಳಲ್ಲಿ ಸ್ಥಾಪಿಸಿ, ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಅನುಕೂಲ ಮಾಡಬೇಕು.
3. ಬಿಸಿಲಿನ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಮತ್ತು ಬಿಸಿ ಗಾಳಿ ಬೀಸುತ್ತಿರುವುದರಿಂದ ರಸ್ತೆಗಳಲ್ಲಿ ನೀರು ಸಿಂಪಡಿಸಿ ತಾಪಮಾನವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು
ಮೌನೇಶ್
ಎಐಡಿವೈಓ, ರಾಯಚೂರು…ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ನೀಡಿದ ನಿಯೋಗದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ಸಂಘಟನೆಯ ಪದಾಧಿಕಾರಿಗಳಾದ , ಮೌನೇಶ್, ನೂರ್ ಪಾಶಾ, ಅಶೋಕ್, ಹಿರಿಯ ನಾಗರಿಕರಾದ ವೀರೇಶ್ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ರುದ್ರಯ್ಯ ಗುಣಾರಿ, ಅಣ್ಣಪ್ಪ, ತಾಯಪ್ಪ ಮುಂತಾದವರು ಇದ್ದರು.

Leave a Reply

Your email address will not be published. Required fields are marked *