ಮಾನ್ವಿ : ಮಾನ್ವಿ ತಾಲೂಕಿನ ಪಾಲಕರ ಮನದಲ್ಲಿ ವಿಶಿಷ್ಠ ಸ್ಥಾನ ಪಡೆದ ನೇತಾಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡಿ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರ್ ಹೇಳಿದರು. ಅವರು ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ನೇತಾಜಿ ಸೈನ್ಸ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳ ಟ್ಯಾಲೆಂಟ್ ಹಂಟ್ ಪರೀಕ್ಷೆಯ ಉದ್ಘಾಟನೆ ಮಾಡಿ ಮಾತನಾಡಿದರು.
ಇಂದಿನ ಶಿಕ್ಷಣ ವ್ಯಾಪಾರಮಯವಾಗಿದ್ದು, ದುಬಾರಿ ಶುಲ್ಕದ ನಡುವೆಯೂ ಪಾಲಕರು ಸಾಲಸೋಲು ಮಾಡಿ ಮಕ್ಕಳನ್ನು ಓದಿಸುವ ಪರಿಸ್ಥಿತಿ ಉಂಟಾಗಿದೆ. ಆದರೆ ನೇತಾಜಿ ಸೈನ್ಸ್ ಕಾಲೇಜಿನಲ್ಲಿ ಗಟ್ಟಿ ಶಿಕ್ಷಣದ ಜೊತೆಗೆ ಕಡಿಮೆ ಶುಲ್ಕದಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಟ್ಯಾಲೆಂಟ್ ಹಂಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ಉದ್ದೇಶ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಆಡಳಿತಾಧಿಕಾರಿ ಡಾ. ಕೆ. ವಿನಯಾ ಮಾತನಾಡಿ, ಕಾಲೇಜಿನಲ್ಲಿ ಅತ್ಯಾಧುನಿಕ ಲ್ಯಾಬ್, ನುರಿತ ಉಪನ್ಯಾಸಕ ವೃಂದ ಹಾಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಜ್ಞಾನ ವಿಭಾಗವನ್ನು ವಾಣಿಜ್ಯ ಮತ್ತು ಕಲಾ ವಿಭಾಗಗಳಂತೆ ಅತ್ಯುತ್ತಮವಾಗಿ ನಡೆಸಲಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಈ. ನರಸಿಂಹ ವಹಿಸಿದ್ದರು. ಕೆ. ವಿಜಯಲಕ್ಷ್ಮಿ, ಕೆ. ರಾಜರವಿ ವರ್ಮಾ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಆರೀಫ್, ಅನೀಸ್ ಫಾತಿಮಾ, ಬಸವರಾಜ್, ರಹಿಂಪಾಷಾ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.
ಈ ಪ್ರತಿಭಾ ಪರೀಕ್ಷೆಯಲ್ಲಿ ಮಾನ್ವಿ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರೌಢಶಾಲೆಗಳ 1387 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಪ್ರಿತಾ (ತಂದೆ ಬಸವರಾಜ್), ಐಶ್ವರ್ಯ ಪಾಟೀಲ್ (ತಂದೆ ಸುದೀಪ್ ಪಾಟೀಲ್), ಸುಖದೇವ್ (ತಂದೆ ಪರಶುರಾಮ್), ರುಕ್ಮಿಣಿ (ತಂದೆ ರಘೋತ್ತಮರಾವ್), ಉಝೇರ್ (ತಂದೆ ಪೀರಭಾಷಾ), ಟಿ. ಸಿದ್ದಾರ್ಥ (ತಂದೆ ಟಿ. ರವಿ), ಶ್ರೀನಿವಾಸ್ (ತಂದೆ ಮಹಾದೇವ), ಶಿವಮಣಿ (ತಂದೆ ಶ್ರೀಧರ್), ಮನೋಜ್ (ತಂದೆ ಹರೀಬಾಬು), ಸಿದ್ದೇಶ (ತಂದೆ ಚೈತನ್ಯ), ಚೇತನ್ (ತಂದೆ ಗೋವಿಂದರಾಜ್) ಅವರು ಪ್ರಥಮ ಸ್ಥಾನಗಳನ್ನು ಪಡೆದು ನಗದು ಬಹುಮಾನ ಮತ್ತು ಸನ್ಮಾನ ಪಡೆದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಘೋಷಿಸಲಾಯಿತು



