ಲಿಂಗಸಗೂರು : ಪಟ್ಟಣದಲ್ಲಿ ಕುಡಿಯುವ ನೀರಿನ ಗುಣಮಟ್ಟ ಕಾಪಾಡುವ ಹಾಗೂ ಅಕ್ರಮ ನೀರು ಶುದ್ಧೀಕರಣ ಘಟಕಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪುರಸಭೆ ಮುಖ್ಯಾಧಿಕಾರಿ ನಟರಾಜ ಅವರು ಅಧಿಕಾರಿಗಳ ತಂಡದೊಂದಿಗೆ ದಿಡೀರ್ ಭೇಟಿ ನೀಡಿ ವಿವಿಧ ನೀರು ಶುದ್ಧೀಕರಣ ಹಾಗೂ ಮಿನರಲ್ ವಾಟರ್ ತಯಾರಿಕಾ ಘಟಕಗಳನ್ನು ಪರಿಶೀಲಿಸಿದರು.
ಪಟ್ಟಣದ ಕೈಗಾರಿಕಾ ಪ್ರದೇಶದ ಸಮೀಪ ಕಾರ್ಯನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಪುರಸಭೆಯಿಂದ ನೀಡಲಾದ ವ್ಯಾಪಾರ ಪರವಾನಿಗೆ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ, ಆರೋಗ್ಯ ಇಲಾಖೆಯ ಪ್ರಮಾಣಪತ್ರ, ನೀರಿನ ಗುಣಮಟ್ಟ ಪರೀಕ್ಷಾ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಕೆಲವು ಘಟಕಗಳಲ್ಲಿ ದಾಖಲೆಗಳು ತಕ್ಷಣ ಲಭ್ಯವಾಗದಿರುವುದು ಗಮನಕ್ಕೆ ಬಂದಿದ್ದು, ಘಟಕದ ಮಾಲೀಕರು ಸ್ಥಳದಲ್ಲಿರದ ಕಾರಣ ಸಿಬ್ಬಂದಿ ಬಳಿಕ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ನಟರಾಜ ಅವರು, ನಿಯಮಾನುಸಾರ ದಾಖಲೆಗಳನ್ನು ಸಲ್ಲಿಸದ ಘಟಕಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಪರವಾನಿಗೆ ಪಡೆಯದೆ ಕಾರ್ಯನಿರ್ವಹಿಸುವ ನೀರು ಶುದ್ಧೀಕರಣ ಘಟಕಗಳ ವಿರುದ್ಧ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರಿಗೆ ಪೂರೈಸುವ ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರದ ನಿಯಮಾವಳಿ, ಆರೋಗ್ಯ ಹಾಗೂ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಕಾರ್ಯನಿರ್ವಹಿಸುವ ಘಟಕಗಳು ಪತ್ತೆಯಾದಲ್ಲಿ ಅವುಗಳನ್ನು ಮುಚ್ಚುವ ಕ್ರಮ ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಮಾರ್ಚ್ 31 ರಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಅಧ್ಯಕ್ಷ ತಿಮ್ಮಾ ರೆಡ್ಡಿ ಮುನ್ನೂರ ಅವರ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಅಕ್ರಮ ನೀರು ಶುದ್ಧೀಕರಣ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುರಸಭೆ ಆಡಳಿತ ಗುರುವಾರ ದಿಢೀರ್ ತಪಾಸಣೆ ನಡೆಸಿದ್ದು, ಮುಂದಿನ ದಿನಗಳಲ್ಲಿಯೂ ಪರಿಶೀಲನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *