ಮಾನ್ವಿ, ಜೂನ್ 10: ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಪ್ರವಾಸಿ ಮಂದಿರದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ರಮದ ಕುರಿತು ಬಿ.ಎಲ್.ಎ., ಬಿ.ಎಲ್.ಎ.-1, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪುರಸಭೆಯ ಮಾಜಿ ಸದಸ್ಯರ ಸಭೆ ನಡೆಯಿತು.

 

ಸಭೆಯಲ್ಲಿ ಮಾಜಿ ಸಚಿವರು, ವಿಧಾನ ಪರಿಷತ್ತಿನ ಮಾಜಿ ಸಭಾ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ. ಹಂಪಯ್ಯ ನಾಯಕ್ ಭಾಗವಹಿಸಿ ಮಾರ್ಗದರ್ಶನ ನೀಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್. ಬೋಸರಾಜು ಅವರು, ಮಾನ್ವಿ ಪುರಸಭೆ ವ್ಯಾಪ್ತಿಯ ಅನೇಕ ಮತಗಟ್ಟೆಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮತದಾರರ ಮ್ಯಾಪಿಂಗ್ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಬಿ.ಎಲ್.ಓ.ಗಳಿಗೆ ಪಕ್ಷದ ಬಿ.ಎಲ್.ಎ.ಗಳು ಸಮರ್ಪಕ ಸಹಕಾರ ನೀಡಿದಾಗ ಮಾತ್ರ ಚುನಾವಣಾ ಆಯೋಗದ ಮತಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಹೇಳಿದರು.

 

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ನಿರ್ಲಕ್ಷ್ಯ ತೋರಬಾರದು. ಈ ಕಾರ್ಯದ ಬಗ್ಗೆ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಅಮೂಲ್ಯವಾದ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು.

 

ಪ್ರತಿ ಮತಗಟ್ಟೆಯಲ್ಲೂ ಶೇಕಡಾ 100ರಷ್ಟು ಮ್ಯಾಪಿಂಗ್ ಹಾಗೂ ಪರಿಶೀಲನಾ ಕಾರ್ಯ ಪೂರ್ಣಗೊಂಡಾಗ ಮಾತ್ರ ಆ ಮತಗಟ್ಟೆಯ ಕೆಲಸ ಯಶಸ್ವಿಯಾಗಿ ಮುಗಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

 

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಪುರಸಭೆಯ ಮಾಜಿ ಸದಸ್ಯರು, ಪಕ್ಷದ ವತಿಯಿಂದ ನೇಮಕಗೊಂಡ ಬಿ.ಎಲ್.ಎ.ಗಳು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *