ನಮಗೆ ಕಂಡುಬರುವ ಖಾಯಿಲೆಗಳಿಗೆ ರೋಗ ಯಾವುದು ಹಾಗೂ ಅದಕ್ಕೆ ಯಾವ ಚಿಕಿತ್ಸೆ ನೀಡಬೇಕು ಎಂದು ನಿರ್ಧರಿಸುವವರು ವೈದ್ಯರೆ ಹೊರತು, ಸಾಮಾಜಿಕ ಜಾಲತಾಣಗಳಲ್ಲಿ ತಾವೇ ವೈದ್ಯರಂತೆ ಬಿಂಬಿಸಿಕೊಂಡು ತಪ್ಪು ಮಾಹಿತಿ ನೀಡುವವರಲ್ಲ, ಈ ದಿಶೆಯಲ್ಲಿ ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌‌ನಿಂದ ಮುಕ್ತಗೊಳಿಸಲು ನೆಮ್ಮದಿಯ ಜೀವನ ನಡೆಸಲು ಪ್ರಸ್ತುತ 14 ವರ್ಷದ ಹೆಣ್ಣು ಮಕ್ಕಳಿಗೆ ಹಾಕಲಾಗುವ ಹೆಚ್.ಪಿ.ವಿ ಲಸಿಕೆಯನ್ನು ಪಾಲಕರು ಯಾವುದೆ ಹಿಂದೇಟು ಹಾಕದೆ ನಿಮ್ಮ ಮಗಳ ಸುರಕ್ಷತೆಗಾಗಿ ಉಚಿತವಾಗಿ ಹಾಕಿಸಿ ಎಂದು ಜಹೀರಾಬಾದ್‌ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶ್ವೇತಾಂಬರಿ ತಿಳಿಸಿದರು.

 

ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಹೀರಾಬಾದ್‌ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಆಗಮಿಸಿದ ವಿಧ್ಯಾರ್ಥಿನಿಯರ, ತಂದೆ- ತಾಯಂದಿರಿಗೆ ಜಾಗೃತಿ ನೀಡಿ ಮಾತನಾಡುತ್ತಾ, ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದ್ದು, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರಲ್ಲದವರು ಹರಡಿಸುವ ತಪ್ಪು ಮಾಹಿತಿ ನಂಬದೆ, ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆ ತಪ್ಪದೆ ಹಾಕಿಸಿ. ಅಲ್ಲದೆ ಪೋಷಕರು ತಮ್ಮ ಇದಕ್ಕಾಗಿ ತಮ್ಮ ಮಗಳನ್ನು ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಚಿತವಾಗಿ ಲಸಿಕೆ ಹಾಕಿಸಲು ಕೋರಿದರು.

 

*ಗರ್ಭಕಂಠದ ಕ್ಯಾನ್ಸರ್‌‌ ಉಂಟಾಗುವ ಕಾರಣಗಳು:*

ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ.

 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಶುಶ್ರೂಷಣಾಧಿಕಾರಿ ಸುವರ್ಣ, ಔಷಧಾಧಿಕಾರಿ ಶಬನಮ್‌, ಪ್ರಯೋಗಾಲಯ ತಂತ್ರಜ್ಞ ಅತ್ತಾಉಲ್ಲಾ, ಆಶಾ ಕಾರ್ಯಕರ್ತೆ ಶಾರದಾ, ಸೇರಿದಂತೆ ತಾಯಂದಿರು ಪಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *