ಲಿಂಗಸಗೂರು, : ಪಟ್ಟಣದ ಆರಾಧ್ಯ ದೈವವಾದ ದೊಡ್ಡ ಹನುಮಂತ ದೇವರ ವಾರ್ಷಿಕ ಜಾತ್ರಾಮಹೋತ್ಸವವು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡವು. ದೊಡ್ಡ ಹನುಮಂತ ದೇವರಿಗೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು, ಭಕ್ತರು ಭಜನೆ, ಜಯಘೋಷಗಳೊಂದಿಗೆ ದೇವರ ದರ್ಶನ ಪಡೆದರು.
ಪ್ರತಿ ವರ್ಷದ ಸಂಪ್ರದಾಯದಂತೆ ಅಂಬಾಭವಾನಿ ದೇವಿಯ ಉಡಿತುಂಬುವ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಹರಕೆ ಸಲ್ಲಿಸಿದರು.
ಸಂಜೆ 7 ಗಂಟೆಗೆ ಹನುಮಂತ ದೇವರ ಉತ್ಸವ ಮೂರ್ತಿ ಹಾಗೂ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಡೊಳ್ಳು, ತಾಳ, ಭಾಜಾ-ಭಜಂತ್ರಿಗಳ ನಾದ, ಭಕ್ತರ ಜಯಘೋಷಗಳ ನಡುವೆ ರಥೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ರಥೋತ್ಸವದ ವೇಳೆ ದೇವಸ್ಥಾನ ಸಮಿತಿ ಸದಸ್ಯರು, ಗಣ್ಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಜಾತ್ರೋತ್ಸವಕ್ಕೆ ಭಕ್ತಿ ಮೆರಗು ನೀಡಿದರು. ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತದಿಂದ ಸೂಕ್ತ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

Leave a Reply

Your email address will not be published. Required fields are marked *