ಸಿಂಧನೂರು ಏ3: ಸಿಂಧನೂರು ತಾಲೂಕಿನಾದ್ಯಂತ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಶಾಕೀರ ಸರ್ ತಾಲೂಕು ನೋಡಲ್ ಅಧಿಕಾರಿಗಳಾಗಿದ್ದು ಮಾನ್ಯರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಯ್ಯನಗೌಡ, ತಾಲೂಕು ಆಯುಷ್ ಅಧಿಕಾರಿ ಡಾ. ಅಹಮದ್ ಶರೀಫ್, ಗ್ರಾಮೀಣ ಪೊಲೀಸ್ ಠಾಣೆ ಮತ್ತು ಬಳಗಾನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಇಲಾಖಾ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಾಚರಣೆಯ ವೇಳೆ ಬೆಳಗುರ್ಕಿಯಲ್ಲಿ 01, ಅಲಬನೂರಿನಲ್ಲಿ 03 ಸೇರಿದಂತೆ ಒಟ್ಟು 16 ಕ್ಲಿನಿಕ್‌ಗಳನ್ನು ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು. ಈ ವೇಳೆ ಆಯಾ ಕ್ಲಿನಿಕ್‌ಗಳಲ್ಲಿನ ವೈದ್ಯರು ಹೊಂದಿರುವ ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ಹಾಗೂ ಯುನಾನಿ ಪದವಿ ಪ್ರಮಾಣಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.
ಈ ಪೈಕಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗವುದು ಎಂದರು. ಒಟ್ಟು 02 ಕ್ಲಿನಿಕ್‌ಗಳನ್ನು ತಕ್ಷಣವೇ ಸೀಜ್ ಮಾಡಲಾಗಿದ್ದು, 05 ಕ್ಲಿನಿಕ್‌ಗಳ ಕೆ ಪಿ ಎಂಇ ಕಾಯ್ದೆ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದಿದ್ದು ಪರಿಶೀಲನಾ ಹಂತದಲ್ಲಿದೆ ಎಂದರು ಉಳಿದ 09 ಕ್ಲಿನಿಕ್‌ಗಳ ಮಾಲೀಕರಿಗೆ ಸೂಕ್ತ ನೋಟಿಸ್ ಜಾರಿ ಮಾಡಲಾಗಿದೆ. ಕಾರ್ಯಾಚರಣೆಯು ಜವಳಗೇರಾದಲ್ಲಿ 5, ಆರ್‌ಎಚ್ ಕ್ಯಾಂಪ್-2 ರಲ್ಲಿ 02, ಮರ ಕ್ಯಾಂಪ್‌ನಲ್ಲಿ 02, ಮಾಡಸಿರ್ವಾರದಲ್ಲಿ 01 ಸೇರಿದಂತೆ ವಿವಿಧ ಭಾಗಗಳಲ್ಲಿ ಜಂಟಿಯಾಗಿ ನಡೆದಿದೆ.
ಅಧಿಕೃತ ವೈದ್ಯಕೀಯ ಪದವಿ ಪಡೆಯದೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವವರ ವಿರುದ್ಧ ಇನ್ನು ಮುಂದೆಯೂ ಜಿಲ್ಲೆಯಾದ್ಯಂತ ಇದೇ ರೀತಿಯ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳ ತಂಡವು ಎಚ್ಚರಿಸಿದೆ.
ಸಾರ್ವಜನಿಕರು ಅನಧಿಕೃತ ವೈದ್ಯರ ಕ್ಲಿನಿಕ್‌ಗಳಿಗೆ ಭೇಟಿನೀಡಿ ಚಿಕಿತ್ಸೆ ಪಡೆಯಲು ಮುಂದಾಗಬಾರದು ಕೇವಲ ಸರ್ಕಾರಿ ಅಥವಾ ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಡಾ.ಸೈ.ಶಾಕೀರ ಸಿಂಧನೂರ ತಾಲೂಕಿನ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ.ಕ್ಷಯರೋಗ ನಿಯಂತ್ರಣಾಧಿಕಾರಿಗಳು ರಾಯಚೂರ,ಡಾ.ಅಯ್ಯನಗೌಡ ತಾಲೂಕಾರೋಗ್ಯಾಧಿಕಾರಿಗಳು ಸಿಂಧನೂರ,ಡಾ.ಮಣಿಶಂಕರ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು ಎಂ.ಬಿ.ಕಾಲೋನಿ,ಡಾ.ಅಮ್ಜದ್ ಪಾಷಾ ಆಯುಶ್ ವೈದ್ಯಾಧಿಕಾರಿಗಳು ಸಿಂಧನೂರು, ಗ್ರೂಪ್-ಡಿ ನೌಕರ ರಮೇಶ ಹಾಜರಿದ್ದರು



