ತಾಳಿಕೋಟಿ: ತಾಲೂಕಿನ ಬಿ.ಸಾಲವಾಡಗಿ ಗ್ರಾಮದಲ್ಲಿ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಜನ್ಮದಿನದ ಅಂಗವಾಗಿ ಶ್ರೀರಾಮ ನವಮಿ ಉತ್ಸವ ಸಮಿತಿಯವರು ಹಮ್ಮಿಕೊಂಡ 4ನೇ ವರ್ಷದ ಶ್ರೀ ರಾಮನ ಭವ್ಯ ಶೋಭಾ ಯಾತ್ರೆಗೆ ನಾವದಗಿ ಬ್ರಹನ್ಮಠದ ಷ.ಬ್ರ. ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಗುರುವಾರ ಸಂಜೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಬದುಕಿನ ಉದಾತ್ತ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ. ಸತತ ನಾಲ್ಕು ವರ್ಷಗಳಿಂದ ಇಲ್ಲಿಯ ಶ್ರೀರಾಮ ನವಮಿ ಸಮಿತಿಯವರು ಇಂಥಹ ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಷಯ ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ನಂತರ ಶ್ರೀ ರಾಮನ ಮೂರ್ತಿಯ ಭವ್ಯ ಶೋಭಾಯಾತ್ರೆ ಗ್ರಾಮದ ಅಗಸಿ ಹೆಬ್ಬಾಗಿಲದಿಂದ ಸಕಲ ವಾದ್ಯ ಮೇಳ ಬಾಜಾ ಡೊಳ್ಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಆರಂಭಗೊಂಡಿತು. ಮೆರವಣಿಗೆ ಉದ್ದಕ್ಕೂ ಯುವಕರು ಕೈಯಲ್ಲಿ ಭಗವಾ ಧ್ವಜ ಹಿಡಿದುಕೊಂಡು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಲ್ಲಮ ಪ್ರಭು ದೇವಸ್ಥಾನಕ್ಕೆ ತಲುಪಿದರು. ನಂತರ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ), ಗಣ್ಯರಾದ ರಾಜು ಗೌಡ ಅನಂತರೆಡ್ಡಿ, ಚಂದ್ರಶೇಖರ ಮೂಲಿಮನಿ, ಬಸನಗೌಡ ಅನಂತರೆಡ್ಡಿ, ಬಸವರಾಜ ದೇಸಾಯಿ, ಶೇಖರಗೌಡ ಯಾಳಗಿ, ಸಂಗನಗೌಡ ಯಾಳಗಿ ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

