ಮಾನ್ವಿ : ತಾಲೂಕಿನ ಪ್ರತಿಷ್ಠಿತ ನೇತಾಜಿ ಶಿಕ್ಷಣ ಸಂಸ್ಥೆಯ ಪಿ.ಯು. ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ವಿಜ್ಞಾನ ವಿಭಾಗಕ್ಕೆ ಉಚಿತ ಹಾಗೂ ಶುಲ್ಕ ರಿಯಾಯಿತಿ ಪ್ರವೇಶಕ್ಕಾಗಿ ಏಪ್ರಿಲ್ 3 ರಂದು ಶುಕ್ರವಾರ ನೇತಾಜಿ ಸೈನ್ಸ್ ಕಾಲೇಜಿನಲ್ಲಿ ಟ್ಯಾಲೆಂಟ್ ಹಂಟ್ ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ. ವಿಜಯಲಕ್ಷ್ಮೀ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕಿನ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು ಎಂದು ತಿಳಿಸಿದರು.
ಪರೀಕ್ಷೆಯು ಏಪ್ರಿಲ್ 3 ರಂದು ಬೆಳಿಗ್ಗೆ 10:30 ರಿಂದ 12:00 ಗಂಟೆಯವರೆಗೆ ನಡೆಯಲಿದ್ದು, 10ನೇ ತರಗತಿಯ ಪಠ್ಯಕ್ರಮ ಆಧರಿಸಿ ಬಹು ಆಯ್ಕೆಯ 60 ಪ್ರಶ್ನೆಗಳು ಕೇಳಲಾಗುತ್ತವೆ. ಇದರಲ್ಲಿ ವಿಜ್ಞಾನ ವಿಷಯದಿಂದ 30 ಪ್ರಶ್ನೆಗಳು ಹಾಗೂ ಗಣಿತದಿಂದ 30 ಪ್ರಶ್ನೆಗಳು ಇರಲಿವೆ. ಪರೀಕ್ಷೆಯ ಅವಧಿ ಒಂದು ಗಂಟೆಯಾಗಿದ್ದು, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬರೆಯುವ ಅವಕಾಶ ಇರುತ್ತದೆ. ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿ ಹಾಗೂ 10ನೇ ತರಗತಿಯ ಹಾಲ್ ಟಿಕೆಟ್ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.
ಈ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ಬಹುಮಾನವಾಗಿ ಲ್ಯಾಪ್ಟಾಪ್, ದ್ವಿತೀಯ ಬಹುಮಾನವಾಗಿ ಸ್ಮಾರ್ಟ್ ಟ್ಯಾಬ್ ಸೇರಿದಂತೆ ಇತರೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ಗಣನೀಯ ರಿಯಾಯಿತಿ ದೊರೆಯಲಿದ್ದು, ಟಾಪ್ 5 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುತ್ತದೆ. ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯೂ ಇರಲಿದೆ. ಈ ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕೆ. ವಿಜಯಲಕ್ಷ್ಮೀ ಕೋರಿದ್ದಾರೆ.

