ಮುದ್ದೇಬಿಹಾಳ: ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನ (ರಿ.) ರಾಯಚೂರು ಹಾಗೂ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹದಿನಾರನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜಾನಪದ ಸಂಭ್ರಮ–2026 ಕಾರ್ಯಕ್ರಮ ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಧರ್ಮಯುದ್ಧ ದಿನಪತ್ರಿಕೆಯ ಸಂಪಾದಕರಾದ ಪುಂಡಲೀಕ ಯ. ಮುರಾಳ ಅವರಿಗೆ ರಾಜ್ಯ ಮಟ್ಟದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದ ಸಣ್ಣ ನಿರಾವರಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಎಸ್. ಬೋಸರಾಜ್ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜಾನಪದ ಹಾಡು, ವಚನ ನೃತ್ಯ, ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಕಲೆಗಳ ಪ್ರದರ್ಶನದ ಮೂಲಕ ಕನ್ನಡ ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಮಹತ್ವವನ್ನು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್, ರಾಜ್ಯ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಜನಪದ ಎಸ್. ಬಾಲಾಜಿ, ಅಂತರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದ ಅಪ್ಪಿಗೆರೆ ತಿಮ್ಮರಾಜು, ಡಾ. ಶರಣಪ್ಪ ಗೋನಾಳ, ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬಿ. ವೆಂಕಟ್ ಸಿಂಗ್, ಬೆಂಗಳೂರು ಗ್ರಾಮಾಂತರ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ ಸೇರಿದಂತೆ ಹಲವಾರು ಸಾಹಿತಿಗಳು, ಜಾನಪದ ಕಲಾವಿದರು, ಗಣ್ಯರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಜಾನಪದ ಕಲೆಗಳು ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಅಮೂಲ್ಯ ಸಂಪತ್ತಾಗಿದ್ದು, ಇಂತಹ ಕಾರ್ಯಕ್ರಮಗಳು ಕಲಾವಿದರಿಗೆ ಉತ್ತೇಜನ ನೀಡುವ ಜೊತೆಗೆ ಯುವ ಪೀಳಿಗೆಗೆ ಜಾನಪದ ಪರಂಪರೆಯ ಮಹತ್ವವನ್ನು ಪರಿಚಯಿಸುತ್ತವೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಪುಂಡಲೀಕ ಯ. ಮುರಾಳ ಅವರು ಮಾತನಾಡಿ, ಈ ಗೌರವವು ತಮ್ಮ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ದೊರೆತ ಮಾನ್ಯತೆಯಾಗಿದೆ ಎಂದು ಹೇಳಿದರು. ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಕನ್ನಡ ಸಂಸ್ಕೃತಿ ಹಾಗೂ ಯುವಜನರ ಅಭಿವೃದ್ಧಿಗೆ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದ ಅಂತ್ಯದಲ್ಲಿ ಗಣ್ಯರನ್ನು ಸನ್ಮಾನಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾನಪದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

Leave a Reply

Your email address will not be published. Required fields are marked *