ಮುದ್ದೇಬಿಹಾಳ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಖಾಲಿ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಉದ್ಯೋಗಾಕಾಂಕ್ಷಿ ಯುವಕರು ಹಾಗೂ ಜನಸಾಮಾನ್ಯರ ವೇದಿಕೆಯ ಕಾರ್ಯಕರ್ತರು ಯುವ ಅಧಿವೇಶನ ನಡೆಸಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕರು ಹಾಗೂ ಚಿಂತಕರು ಅಧಿವೇಶನದಲ್ಲಿ ಭಾಗವಹಿಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ, ಖಾಲಿ ಹುದ್ದೆಗಳ ಹೆಚ್ಚಳ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಅಸಮರ್ಪಕತೆ ಕುರಿತು ಚರ್ಚೆ ನಡೆಸಿದರು. ಬಳಿಕ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಒಳಗೊಂಡ ಮನವಿಪತ್ರವನ್ನು ತಹಶೀಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಅಧಿವೇಶನದ ಅಧ್ಯಕ್ಷತೆಯನ್ನು ನ್ಯಾಯವಾದಿ ಪಿ.ಬಿ. ಮಾತಿನ ವಹಿಸಿದ್ದರು. ಈ ವೇಳೆ ಮಾತನಾಡಿದ ಮುಖಂಡರಾದ ಪಿ.ಬಿ. ಗೌಡರ ಮತ್ತು ಯಲ್ಲಪ್ಪ ಹೆಗಡೆ, ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಸುಮಾರು 2.84 ಲಕ್ಷ ಸರ್ಕಾರಿ ಹುದ್ದೆಗಳು ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿರುವ ಸುಮಾರು 9.64 ಲಕ್ಷ ಹುದ್ದೆಗಳು ದೀರ್ಘಕಾಲದಿಂದ ಖಾಲಿಯೇ ಉಳಿದಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಹುದ್ದೆಗಳನ್ನು ಇನ್ನಷ್ಟು ವಿಳಂಬ ಮಾಡದೆ ತಕ್ಷಣವೇ ಭರ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕೆಪಿಎಸ್ಸಿ, ಕೆಇಎ, ಕೆಎಸ್‌ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ನೇಮಕಾತಿ ನಡೆಸುವ ಎಲ್ಲಾ ಪ್ರಾಧಿಕಾರಗಳು ಪ್ರತಿವರ್ಷ ಖಾಲಿ ಹುದ್ದೆಗಳ ವಿವರ ಮತ್ತು ಪರೀಕ್ಷಾ ದಿನಾಂಕಗಳನ್ನು ಒಳಗೊಂಡ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿ ನಿಗದಿತ ವೇಳೆಯಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಲಾಯಿತು.
ಕೇಂದ್ರ ಮಟ್ಟದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. ಜೊತೆಗೆ ಉದ್ಯೋಗಾಕಾಂಕ್ಷಿಗಳಿಗೆ ಹೊರೆಯಾಗುತ್ತಿರುವ ದುಬಾರಿ ಅರ್ಜಿ ಶುಲ್ಕವನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನೂ ಅಧಿವೇಶನದಲ್ಲಿ ಮುಂದಿಡಲಾಯಿತು.
ರಾಜ್ಯದ ನೇಮಕಾತಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಕೇಂದ್ರದ ಮಾದರಿಯಲ್ಲಿ ಕೆಪಿಎಸ್ಸಿಯನ್ನು ಸಮಗ್ರವಾಗಿ ಪುನರ್‌ರಚನೆ ಮಾಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಸಧ್ಯದ ಸರ್ಕಾರಗಳು ನೇಮಕಾತಿ ಪ್ರಕ್ರಿಯೆಯನ್ನು ವರ್ಷಗಟ್ಟಲೆ ಮುಂದೂಡುತ್ತಿರುವುದರಿಂದ ಸಾವಿರಾರು ಯುವಕರು ವಯೋಮಿತಿ ಮೀರುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪರೀಕ್ಷಾ ಅಕ್ರಮಗಳು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ದುಃಖಕರ ಸಂಗತಿ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣವೇ ಯುವಕರ ಬೇಡಿಕೆಗಳತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಅಧಿವೇಶನದಲ್ಲಿ ಉದ್ಯೋಗಾಕಾಂಕ್ಷಿಗಳಾದ ಅನೀಲ ವಾಲಿಕಾರ, ಮುತ್ತಣ್ಣ ಒಡ್ಡೋಡಗಿ, ಮುತ್ತು ಕನ್ನೂರ, ಜುಮ್ಮಣ್ಣ ಹೊಕ್ರಾಣಿ, ಬಸವರಾಜ ಹುಲಗಣ್ಣಿ, ಸಿದ್ದು ವಾಲಿಕಾರ, ಸೀತಪ್ಪ ಗಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.

