ಮುದ್ದೇಬಿಹಾಳ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ಒಳ ಮೀಸಲಾತಿಯನ್ನು ತಪ್ಪಿಸಿ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಪಟ್ಟಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದಲೇ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಳ ಮೀಸಲಾತಿ ಜಾರಿಗೊಳಿಸದೆ ನೇಮಕಾತಿ ಪ್ರಕ್ರಿಯೆ ಮುಂದುವರಿಸುವ ಸರ್ಕಾರದ ನಡೆ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ ಸುಮಾರು 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ. ಆದರೂ ಒಳ ಮೀಸಲಾತಿ ಜಾರಿಗೊಳಿಸದೆ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇನ್ನೂ ಸರ್ಕಾರ ಫೆಬ್ರುವರಿ 27ರಂದು ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆದು, ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನಂತೆ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಸಾವಿರಾರು ಹುದ್ದೆಗಳನ್ನು ಒಳ ಮೀಸಲಾತಿ ಆಧಾರದಲ್ಲಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಕ್ಷಣ ಸ್ಪಂದಿಸಿ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಮಾರ್ಚ್ 11ರಂದು “ಬೆಂಗಳೂರು ಚಲೋ” ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡಿದ್ದವು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಮಂಜುನಾಥಸ್ವಾಮಿ ಕುಂದರಗಿ, ತಿಪ್ಪಣ್ಣ ದೊಡಮನಿ, ಬಾಲಚಂದ್ರ ಹುಲ್ಲೂರ, ಸುಭಾಸ ಕಾಳಗಿ, ಮುತ್ತಪ್ಪ ಪೂಜಾರಿ, ಮಾರುತಿ ಸಿದ್ದಾಪೂರ, ಆನಂದ ಮುದೂರ, ಬೀಮರಾಯ ಹುಲ್ಲೂರ, ಶೇಖು ಆಲೂರ, ಕೆ.ಬಿ. ದೊಡಮನಿ, ರವಿ ಬಸರಕೋಡ, ಪರಸುರಾಮ ಶಿಂದೆ, ಮಾಹಾಂತೇಶ ಕಂದಗನೂರ, ಹುಲಗೇಪ್ಪ ನಾಗರಬೇಟ್ಟ, ಶ್ರೀದರ ಹಳ್ಳೂರ, ಬಸವರಾಜ ನಾಗರಬೇಟ್ಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *