ಮುದ್ದೇಬಿಹಾಳ: ಕ್ಷೇತ್ರದ ಜನರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದ್ದು, ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲೂಕಿನ ಯರಗಲ್ಲ, ದೇವೂರ, ರಕ್ಕಸಗಿ ಹಾಗೂ ಕಾರಕೂರ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಒಟ್ಟು ಸುಮಾರು ₹5.80 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಯರಗಲ್ಲ–ದೇವೂರ ರಸ್ತೆ ಅಭಿವೃದ್ಧಿಗೆ ₹4.60 ಕೋಟಿ, ರಕ್ಕಸಗಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಹಾಗೂ ಕಾರಕೂರ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಆಡಳಿತ ನೀಡುತ್ತಿದೆ. ಹಿಂದಿನ ಸರ್ಕಾರ ಬಿಟ್ಟಿದ್ದ ಸಾಲದ ಹೊರೆಯನ್ನು ಸಹ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ವಿವಿಧ ಸರ್ಕಾರಿ ಇಲಾಖೆಗಳಲ್ಲಿನ 15 ರಿಂದ 20 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಮುಂಬರುವ ಬಜೆಟ್ ಜನರ ಹಿತದೃಷ್ಟಿಯಿಂದ ಉತ್ತಮವಾಗಿರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯರಗಲ್ಲ ಗ್ರಾಮದ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ಹಾಗೂ ಅಡಿಗೆ ಕೋಣೆ ನಿರ್ಮಾಣದ ಬೇಡಿಕೆಯನ್ನು ಗ್ರಾಮಸ್ಥರು ಸಲ್ಲಿಸಿದರು. ಅದನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಲಾಜಿ ಶುಗರ್ಸ್ ಮುಖ್ಯಸ್ಥ ರಾಹುಲಗೌಡ ಪಾಟೀಲ, ನಿರ್ದೇಶಕ ಶ್ರೀನಿವಾಸ ಅರಕೇರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರುತಿ ಗುರವ, ಬಸವರಾಜ ಡಮನಾಳ, ಶಾಂತಗೌಡ ಪಾಟೀಲ, ಕುಮಾರ ಕಡಿ, ಮಹಾಂತೇಶ್ ವಾಲಿ, ಭೀಮರಾವ್ ಹಳ್ಳೂರ, ಆಲೂರು ಗ್ರಾಮ ಪಂಚಾಯಿತಿ ಪಿಡಿಒ ರಾಜು ನಾರಾಯಣ, ಕೆಆರ್‌ಐಡಿಎಲ್ ಇಂಜಿನಿಯರ್ ನಾಗರಾಜ್ ಬಿರಾದಾರ, ರಕ್ಕಸಗಿ ಪಿಡಿಒ ಮಾಲಾಶ್ರೀ ಅಮ್ಮನ್ನವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೋಟ್:
“ಸದ್ಯ ಲಭ್ಯವಿರುವ ಅನುದಾನದಲ್ಲಿ ಯರಗಲ್ಲ–ದೇವೂರ ರಸ್ತೆಯನ್ನು ಸುಸ್ಥಿತಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಡಾಂಬರೀಕರಣಗೊಳಿಸಲಾಗುವುದು.”
— ಸಿ.ಎಸ್. ನಾಡಗೌಡ, ಶಾಸಕ ಹಾಗೂ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷರು.

Leave a Reply

Your email address will not be published. Required fields are marked *